ಮಗನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಸಮಾಜಕ್ಕೆ ಮಾದರಿಯಾದ ಉದ್ಯಮಿ
ಉಡುಪಿ : ಉಡುಪಿಯ ಉದ್ಯಮಿಯೋರ್ವರು ತನ್ನ ಮಗನ ಹುಟ್ಟುಹಬ್ಬವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ನೆರೆ ಸಂತ್ರಸ್ತರಿಗೆ ನೆರವಾಗುವ ಮೂಲಕ ವಿಶೇಷವಾಗಿ ಆಚರಿಸಿ ಇತರರಿಗೆ ಮಾದರಿಯಾದರು.
ಉಡುಪಿ ಕಡಿಯಾಳಿಯ ಸಮಾಜ ಸೇವಕ ಮತ್ತು ಬಿಜೆಪಿ ಮುಖಂಡರಾಗಿರುವ ಉದ್ಯಮಿ ಕೆ. ರಾಘವೇಂದ್ರ ಕಿಣಿ ತನ್ನ ಹಿರಿಯ ಮಗ ಕೆ. ರಿತ್ವಿಕ್ ಕಿಣಿಯ ಹತ್ತನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದರು. ಯಾವುದೇ ಆಡಂಬರವಿಲ್ಲದೆ, ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ 130 ಬಡ ಕೂಲಿ ಕಾರ್ಮಿಕರಿಗೆ ತಲಾ 10 ಕೆ.ಜಿ. ಅಕ್ಕಿ ಹಾಗೂ ಕೊಡೆ ವಿತರಿಸಿ ಹುಟ್ಟುಹಬ್ಬದ ಸಂಭ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದರು.
ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಕೆ. ರಿತ್ವಿಕ್ ಕಿಣಿಯ ಸರಳ ಹುಟ್ಟುಹಬ್ಬದ ಸಮಾರಂಭದಲ್ಲಿ ತನ್ನ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕರಿಗೆ ಮಾತ್ರವಲ್ಲದೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನಿತ್ಯ ಬಳಕೆಯ 25,000 ರೂ. ವೆಚ್ಚದ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದರು.
ನನ್ನ ಮಗನ ಹುಟ್ಟುಹಬ್ಬವನ್ನು ಸದಾ ನೆನಪಿನಲ್ಲಿರುವಂತೆ ಇರಲು ಮೊದಲೇ ಯೋಜನೆಯನ್ನು ಹಾಕಿಕೊಂಡಿದೆ. ಯಾವುದೇ ಆಡಂಬರವಿಲ್ಲದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಜೊತೆಗೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನನ್ನಿಂದಾದ ಸಹಾಯವನ್ನು ಮಾಡಲು ಯೋಜನೆಯನ್ನು ಹಾಕಿಕೊಂಡಿದ್ದೆ. ಇದು ಪ್ರಚಾರಕ್ಕೋಸ್ಕರ ಅಲ್ಲ. ಬದಲಾಗಿ ಇಂತಹ ಕಾರ್ಯಕ್ರಮ ಇತರರಿಗೆ ಸ್ಫೂರ್ತಿಯಾಗಲಿ ಎಂದು ಉದ್ಯಮಿ ಕೆ. ರಾಘವೇಂದ್ರ ಕಿಣಿ ತಿಳಿಸಿದರು.