ಮಂಗಳವಾರ ಸಂಪುಟ ರಚನೆ:ಹಾಲಾಡಿ,ಕೋಟ ಸಂಭಾವ್ಯರ ಪಟ್ಟಿಯಲ್ಲಿ
ಬೆಂಗಳೂರು: ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಒಪ್ಪಿಗೆ ಸೂಚಿಸಿದ್ದು, ಮಂಗಳವಾರ ಮೊದಲ; ಹಂತದ ಸಂಪುಟ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ.
ನವದೆಹಲಿಯಲ್ಲಿಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ರಚನೆಗೆ ಅಮಿತ್ ಷಾ ಅನುಮತಿ ನೀಡಿದ್ದಾರೆ. ಪಕ್ಷಾಧ್ಯಕ್ಷರಿಗೆ ಯಡಿಯೂರಪ್ಪ ಸಂಭಾವ್ಯ ಸಚಿವರ ಪಟ್ಟಿಯನ್ನು ಸಲ್ಲಿಸಿದ್ದು, ಸಂಪುಟ ಸೇರುವವರು ಯಾರು ಎನ್ನುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಇದೀಗ ಸಚಿವಾಕಾಂಕ್ಷಿಗಳ ಪಟ್ಟಿಗೆ ಅನುಮೋದನೆ ದೊರೆಯುವುದು ಮಾತ್ರ ಬಾಕಿ ಇದೆ
ಸಂಪುಟ ರಚನೆಗೆ ಅನುಮತಿ ದೊರೆಯುತ್ತಿದ್ದಂತೆ ಗೃಹ ಇಲಾಖೆಯ ಕಚೇರಿಯಿಂದ ನೇರವಾಗಿ ಯಡಿಯೂರಪ್ಪ ವಿಮಾನ ನಿಲ್ದಾಣದ ಕಡೆ ಪ್ರಯಾಣ ಬೆಳೆಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾದ 22 ದಿನಗಳ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಪಕ್ಷದ ರಾಷ್ಟ್ರೀಯ ವರಿಷ್ಟರು ಒಪ್ಪಿಗೆ ನೀಡಿದ್ದಾರೆ. ಭಾನುವಾರ ಅಥವಾ ಸೋಮವಾರ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಅಮಿತ್ ಕಚೇರಿಯಿಂದ ಮುಖ್ಯಮಂತ್ರಿ ಅವರಿಗೆ ರವಾನೆ ಮಾಡಲಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಯ ಬಳಿಕ ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ. ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಕನಿಷ್ಟ 15 ಜನ ಶಾಸಕರು ಸಚಿವರಾಗಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ
ಸಂಭಾವ್ಯರ ಪಟ್ಟಿ
* ಜಗದೀಶ ಶೆಟ್ಟರ್
* ಕೆ.ಎಸ್. ಈಶ್ವರಪ್ಪ
* ಗೋವಿಂದ ಕಾರಜೋಳ
* ಬಸವರಾಜ ಬೊಮ್ಮಾಯಿ
* ಆರ್. ಅಶೋಕ್
* ಬಿ. ಶ್ರೀರಾಮುಲು
* ಜೆ.ಸಿ. ಮಾಧುಸ್ವಾಮಿ
* ಉಮೇಶ ಕತ್ತಿ
* ಪ್ರಭು ಚೌಹಾಣ್
* ಎಸ್.ಎ. ರಾಮದಾಸ್
* ಎಸ್. ಅಂಗಾರ
* ಶಶಿಕಲಾ ಜೊಲ್ಲೆ
* ಹಾಲಾಡಿ ಶ್ರೀನಿವಾಸ ಶೆಟ್ಟಿ
* ಎಚ್.ನಾಗೇಶ್(ಪಕ್ಷೇತರ)
* ಕೋಟ ಶ್ರೀನಿವಾಸ ಪೂಜಾರಿ/ಎನ್. ರವಿಕುಮಾರ್