ಮಂಗಳೂರು ಪೋಲೀಸರ ಕಾರ್ಯಾಚರಣೆ: ದರೋಡೆಗೆ ಸಂಚು ರೂಪಿಸಿದ್ದ 8 ಮಂದಿ ಬಂಧನ
ಮಂಗಳೂರು: ಕೇಂದ್ರ ಸರ್ಕಾರದ Govt.of India NCIB Director ಎಂಬ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು ನಡೆಸುತ್ತಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ ಹರ್ಷ ತಿಳಿಸಿದ್ದಾರೆ.
ಆರೋಪಿಗಳಿಂದ 20 ಲಕ್ಷ ರೂ.ಮೌಲ್ಯದ ಮಹೀಂದ್ರಾ ಟಿಯುವಿ 300 ಮತ್ತು ಎಕ್ಸ್ ಯುವಿ ಕಾರು, ಒಂದು ಪಿಸ್ತೂಲ್, ಒಂದು ರಿವಾಲ್ವರ್, 8 ಜೀವಂತ ಗುಂಡುಗಳು ಹಾಗೂ 10 ಮೊಬೈಲ್ ಫೋನ್‍ಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಣಿಪಾಲ ಮಾಂಡೋವಿ ರೆಸಿಡೆನ್ಸ್ ಎಂಟ್ ಪಾಯಿಂಟ್ ನಿವಾಸಿ, ಕೇರಳ ಮೂಲಕ ಟಿ.ಶ್ಯಾಮ್ ಪೀಟರ್ (53), ಬೆಂಗಳೂರಿನ ಯಲಹಂಕ ನೆಹರೂ ನಗರದ ಸುರಭಿ ಲೇಔಟ್ ನಿವಾಸಿ, ಮಡಿಕೇರಿಯ ಸಿದ್ದಾಪುರ ಮೂಲದ ಟಿ.ಕೆ.ಬೋಪಣ್ಣ (33), ಬೆಂಗಳೂರು ದಕ್ಷಿಣ ನೀಲಸಂದ್ರದ ನಿವಾಸಿ ಮದನ್ (41), ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕಾಕೂಟಪುರ ಗ್ರಾಮದ ನಾಲ್ಕೇರಿ ಎಂಬಲ್ಲಿಯ ನಿವಾಸಿ ಚಿನ್ನಪ್ಪ (38), ಬೆಂಗಳೂರು ಕನಕಪುರ ಮುಖ್ಯರಸ್ತೆಯ ಕಲಘಟ್ಟಪುರ ಪಿಳ್ಳಿಕಾಮ ದೇವಸ್ಥಾನದ ಹತ್ತಿರದ ನಿವಾಸಿ ಸುನೀಲ್ ರಾಜು (35), ಬೆಂಗಳೂರು ಉತ್ತರ ಹಳ್ಳಿ ಗೌಡನಪಾಳ್ಯ ನಿವಾಸಿ ಕೋದಂಡರಾಮ (39), ಮಂಗಳೂರು ಕೂಳೂರು ಕಾರ್ಪೋರೇಷನ್ ಆಫೀಸ್ ಹತ್ತಿರದ ನಿವಾಸಿ ಜಿ.ಮೊಯಿದ್ದೀನ್ (70), ಮಂಗಳೂರು ಪಳ್ನೀರ್ ನಿವಾಸಿ ಎಸ್.ಎ.ಕೆ.ಅಬ್ದುಲ್ ಲತೀಫ್ (59) ಬಂಧಿತ ಆರೋಪಿಗಳು.
ಘಟನೆಯ ವಿವರ: ಮಂಗಳೂರಿನ ಪಂಪ್‍ವೆಲ್ ಬಳಿ ಶುಕ್ರವಾರ ದರೋಡೆ ಮಾಡುವ ಉದ್ದೇಶದಿಂದ ಆರೋಪಿಗಳು ಕಾರಿನಲ್ಲಿ ಕುಳಿತು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕದ್ರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನಂಬರ್ ಪ್ಲೇಟ್ ಇಲ್ಲದ ಪೂರ್ಣ ಕಪ್ಪು ಟಿಂಟ್ ಗ್ಲಾಸ್ ಇದ್ದ ಮಹೀಂದ್ರಾ ಟಿಯುವಿ-300 ಕಾರಿನಲ್ಲಿ ಐವರು ಕುಳಿತಿರುವುದನ್ನು ಗಮನಿಸಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಅವರು ಪರಾರಿಯಾಗಲು ಯತ್ನಿಸಿದ್ದು, ಅವರನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.
ನಂತರ ಕಾರನ್ನು ಪರಿಶೀಲಿಸಿದಾಗ ಕಾರಿನ ಮುಂಭಾಗದಲ್ಲಿ ಎನ್‍ಸಿಐಪಿ ಡೈರೆಕ್ಟರ್, ಗವರ್ನಮೆಂಟ್ ಆಫ್ ಇಂಡಿಯಾ ಎಂದು ಬರೆದಿದ್ದು, ಕಾರಿನಲ್ಲಿ ಚಾಲಕ ಸೇರಿ ಸಫಾರಿ ಡ್ರೆಸ್ ಹಾಕಿದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿಗಳು, ನಮ್ಮ ಜೊತೆ ಸಾಯಿ ಆರ್ಯ ಲಾಡ್ಜ್ ನಲ್ಲಿ ನಮ್ಮ ಸರ್ ಶ್ಯಾಮ್ ಪೀಟರ್ ಹಾಗೂ ಇತರ ಇಬ್ಬರು ಇರುವುದಾಗಿ ಮಾಹಿತಿ ನೀಡಿದ್ದು, ಅವರ ಸೂಚನೆ ಮೇರೆಗೆ ದರೋಡೆ ನಡೆಸಲು ಹೊಂಚು ಹಾಕುತ್ತಿರುವುದಾಗಿ ತಿಳಿಸಿದ್ದಾರೆ.
ಕಾರಿನಲ್ಲಿದ್ದ ಬೋಪಣ್ಣ ಎಂಬಾತನ ಕೈಯಲ್ಲಿ 22 ಮಾದರಿಯ ರಿವಾಲ್ವರ್ ಮತ್ತು 8 ಜೀವಂತ ಗುಂಡುಗಳಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂತರ ಸಾಯಿ ಲಾಡ್ಜ್ ಗೆ ದಾಳಿ ನಡೆಸಿದಾಗ ಅಲ್ಲಿದ್ದ ಮೂವರನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಲ್ಲಿದ್ದವರನ್ನು ಮಂಗಳೂರಿನ ಮೊಹಿದ್ದೀನ್, ಅಬ್ದುಲ್ ಲತೀಫ್ ಮತ್ತು ಶ್ಯಾಮ್ ಪೀಟರ್ ಎಂದು ಗುರುತಿಸಲಾಗಿದೆ. ತಾನು ಕೇಂದ್ರ ಸರ್ಕಾರದ ಎನ್‍ಸಿಐಬಿ ನಿರ್ದೇಶಕ ಎಂದು ನಕಲಿ ಐಡಿ ಕಾರ್ಡ್ ಮತ್ತು ವಿಸಿಟಿಂಗ್ ಕಾರ್ಡ್ ತೋರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಆತನಲ್ಲಿದ್ದ 4.5 ಎಂಎಂ ಪಿಸ್ತೂಲ್, ಲ್ಯಾಪ್‍ಟಾಪ್, ವಾಯಿಸ್ ರೆಕಾರ್ಡರ್, ಹಾಗೂ ಇತರ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಹರ್ಷ, ಉಪ ಪೊಲೀಸ್ ಆಯುಕ್ತ ಅರುಣಾಂಶುಗಿರಿ, ಸಹಾಯಕ ಆಯುಕ್ತ ಲಕ್ಷ್ಮೀ ಗಣೇಶ್, ಭಾಸ್ಕರ ಒಕ್ಕಲಿಗ ಅವರ ಮಾರ್ಗದರ್ಶನದಲ್ಲಿ ಕದ್ರಿ ಠಾಣೆಯ ಪೊಲೀಸ್ ನಿರೀಕ್ಷಕ ಶಾಂತರಾಮ, ಪಿಎಸ್‍ಐ ಮಾರುತಿ, ಎಎಸ್‍ಐ ಧನರಾಜ್ ಪ್ರಶಾಂತ್ ಲೋಕೇಶ್ ನಾಗರಾಜ್, ಮೋಹನ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ ಉಗ್ರರ ದಾಳಿಯ ಸಾಧ‍್ಯತೆಯ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿತ್ತು. ಅದರಂತೆ ನಿನ್ನೆ ಬೆಂಗಳೂರು ನಗರ ಪೊಲೀಸರು ಎಲ್ಲಾ ಡಿಸಿಪಿಗಳಿಗೆ ಈ ಬಗ್ಗೆ ಮೆಮೋ ಕಳುಹಿಸಿ ಭದ್ರತೆ ಹೆಚ್ಚಿಸುವಂತೆ ಆದೇಶಿಸಿದ್ದರು. ಈ ಸಂದರ್ಭದಲ್ಲೇ ಮಂಗಳೂರು ನಗರದ ಲಾಡ್ಜ್ ಒಂದರಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೊನೆಗೂ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಿದ್ದಾರೆ.