ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದ್ದರೆ, ಬಿಜೆಪಿ ಆಕ್ಷೇಪಿಸಿದೆ
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ಕುಮಾರ್ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದ್ದರೆ, ಬಿಜೆಪಿ ಆಕ್ಷೇಪಿಸಿದೆ.
‘ಅತೃಪ್ತ ಶಾಸಕರ ಅನರ್ಹಗೊಳಿಸಿದ ಮಾನ್ಯ ಸಭಾಧ್ಯಕ್ಷರು ಕೊಟ್ಟಿರುವ ತೀರ್ಪನ್ನು ಸ್ವಾಗತಿಸುತ್ತೇವೆ’ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದೆ.
ಅತೃಪ್ತ ಶಾಸಕರ ಅನರ್ಹಗೊಳಿಸಿದ ಮಾನ್ಯ ಸಭಾಧ್ಯಕ್ಷರು ಕೊಟ್ಟಿರುವ ತೀರ್ಪನ್ನು ಸ್ವಾಗತಿಸುತ್ತೇವೆ.
ಮೈತ್ರಿ ಸರ್ಕಾರವನ್ನು ಉರುಳಿಸಬೇಕೆಂದೇ ಬಿಜೆಪಿಯೊಂದಿಗೆ ಕೈ ಜೋಡಿಸಿ ತಮ್ಮ ಪಕ್ಷಗಳಿಗೆ, ತಮ್ಮನ್ನು ಆಯ್ಕೆ ಮಾಡಿದ ಜನತೆಗೆ ದ್ರೋಹ ಬಗೆದ ಈ ಶಾಸಕರುಗಳಿಗೆ ಜನತಾ ನ್ಯಾಯಾಲಯ ಕೂಡ ತಕ್ಕ ಶಿಕ್ಷೆಯನ್ನು ವಿಧಿಸಲಿದೆ.
‘ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿ ಈ ತೀರ್ಪು ಇತಿಶ್ರೀ ಹಾಡಲಿದೆ ಎನ್ನುವುದ ನನ್ನ ನಂಬಿಕೆ’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ.
ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪದವಿ, ಅಧಿಕಾರ ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ. ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟುಹೋಗುತ್ತೇವೆ ಎಂಬುದು ಮುಖ್ಯ. ಸಭಾಧ್ಯಕ್ಷರ ಇಂದಿನ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಅವರ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ.
‘ಅನುಕೂಲಕ್ಕೆ ತಕ್ಕಂತೆ ಭಾನುವಾರ ರಜಾ ದಿನವಾಗುತ್ತೆ. ಅನುಕೂಲಕ್ಕೆ ತಕ್ಕಂತೆ ಕೆಲಸದ ದಿನವೂ ಆಗುತ್ತೆ’ ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರು ಪ್ರಸ್ತಾಪಿಸದೇ ಕಾಲೆಳೆದಿದ್ದಾರೆ.
“ಭಾನುವಾರ” ಕೆಲವು ಸಲ (inconvenient ಆದರೆ) ರಜಾ ದಿನವಾಗುತ್ತದೆ ಮತ್ತು ಕೆಲವು ಸಲ (Convenient ಆದರೆ) Working Day ಆಗುತ್ತದೆ!
ಸ್ಪೀಕರ್ ಸ್ಥಾನಕ್ಕೆ ಕಪ್ಪುಚುಕ್ಕೆ
‘ರಮೇಶ್ಕುಮಾರ್ ಅವರೇ ನಿಮ್ಮ ಬಗ್ಗೆ ಜನರು ಇಟ್ಟಿದ್ದ ಗೌರವ ವಿಶ್ವಾಸ ಕಡಿಮೆಯಾಗಿದೆ. ನೀವು ಆ ಸ್ಥಾನಕ್ಕೆ ಕಪ್ಪುಚುಕ್ಕೆ’ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟರೆ ಗೌರವದಿಂದ ಅಂಗೀಕರಿಸಬೇಕಿತ್ತು. ಆದರೆ ನೀವು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿ ಅನರ್ಹಗೊಳಿಸಿದ್ದೀರಿ. ಪ್ರಜಾತಂತ್ರ ವ್ಯವಸ್ಥೆ ಕಗ್ಗೊಲೆ ಮಾಡಿದ್ದೀರಿ’ ಎಂದು ದೂರಿದ್ದಾರೆ.