ಮೈತ್ರಿ ಸರ್ಕಾರದೊಂದಿಗೆ ಮುನಿಸಿಕೊಂಡು 14 ಶಾಸಕರು ಅನರ್ಹ: ಸ್ಪೀಕರ್

ಬೆಂಗಳೂರು: ಮೈತ್ರಿ ಸರ್ಕಾರದೊಂದಿಗೆ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಎಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅನರ್ಹಗೊಂಡಿದ್ದಾರೆ. ಇದರಿಂದ ಈವರೆಗೆ ಒಟ್ಟು 17 ಶಾಸಕರು ಅನರ್ಹಗೊಂಡಂತೆ ಆಗಿದ್ದು, ರಾಜ್ಯದ ರಾಜಕೀಯ ಬೆಳವಣಿಗೆ ಮತ್ತೊಮ್ಮೆ ದೇಶದ ಗಮನ ಸೆಳೆದಿದೆ.

ವಿಧಾನಸೌಧದಲ್ಲಿ ಭಾನುವಾರ ಮುಂಜಾನೆ 11 ಗಂಟೆಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ರಮೇಶ್‌ಕುಮಾರ್ ಅನರ್ಹಗೊಂಡ ಶಾಸಕರ ಪಟ್ಟಿ ಓದಿದರು.

ಕಾಂಗ್ರೆಸ್ ಶಾಸಕರಾದ ಪ್ರತಾಪ್‌ ಗೌಡ ಪಾಟೀಲ (ಮಸ್ಕಿ), ಬಿ.ಸಿ.ಪಾಟೀಲ (ಹಿರೇಕೆರೂರ), ಶಿವರಾಮ ಹೆಬ್ಬಾರ (ಯಲ್ಲಾಪುರ), ಎಸ್‌.ಟಿ.ಸೋಮಶೇಖರ್ (ಯಶವಂತಪುರ), ಬಿ.ಎ.ಬಸವರಾಜ (ಕೆ.ಆರ್.ಪುರ), ಆನಂದ್‌ ಸಿಂಗ್ (ವಿಜಯನಗರ ಬಳ್ಳಾರಿ), ಆರ್.ರೋಶನ್‌ಬೇಗ್ (ಶಿವಾಜಿನಗರ), ಮುನಿರತ್ನ (ರಾಜರಾಜೇಶ್ವರಿನಗರ), ಡಾ.ಕೆ.ಸುಧಾಕರ (ಚಿಕ್ಕಬಳ್ಳಾಪುರ), ಎಂ.ಟಿ.ಬಿ.ನಾಗರಾಜ್ (ಹೊಸಕೋಟೆ), ಶ್ರೀಮಂತ ಬಾಳಾಸಾಹೇಬ್ ಪಾಟೀಲ್ (ಕಾಗವಾಡ) ಮತ್ತು ಜೆಡಿಎಸ್ ಶಾಸಕರಾದ ಎ.ಎಚ್.ವಿಶ್ವನಾಥ್ (ಹುಣಸೂರು), ಕೆ.ಸಿ.ನಾರಾಯಣಗೌಡ (ಕೆ.ಆರ್.ಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) ಅವರನ್ನು ಅನರ್ಹಗೊಳಿಸಲಾಗಿದೆ ಎಂದು: ರಮೇಶ್‌ಕುಮಾರ್ ಹೇಳಿದರು.

ಗುರುವಾರವಷ್ಟೇ (ಜುಲೈ 25) ಶಾಸಕರಾದ ಮಹೇಶ್ ಕುಮಠಳ್ಳಿ (ಅಥಣಿ), ರಮೇಶ ಜಾರಕಿಹೊಳಿ (ಗೋಕಾಕ), ಆರ್.ಶಂಕರ್ (ರಾಣೆಬೆನ್ನೂರು) ಅವರನ್ನು ಅನರ್ಹಗೊಳಿಸಿ ರಮೇಶ್‌ಕುಮಾರ್ ಆದೇಶಿಸಿದ್ದರು.

‘ಸ್ಪೀಕರ್ ಆಗಿರುವ ಕಾರಣಕ್ಕೆ ನನ್ನ ಮೇಲೆ ಮಾನಸಿಕ ಒತ್ತಡ ಹಾಕಲಾಗಿದೆ. ಖಿನ್ನನಾಗಿದ್ದಾನೆ. ಇದು ನನ್ನ ನಾಲ್ಕು ದಶಕಗಳ ಜೀವನದ ಪ್ರಮುಖ ಘಟ್ಟ, ಬಹುಶಃ ಕೊನೆಯ ಘಟ್ಟವೂ ಆಗಬಹುದು. ಅತ್ಯಂತ ಭಯ, ಗೌರವ, ಜವಾಬ್ದಾರಿಯನ್ನು ಹೊಟ್ಟೆಯಲ್ಲಿಟ್ಟುಕೊಂಡು ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ರಮೇಶ್‌ಕುಮಾರ್ ತೀರ್ಪು ಓದಿದರು.

ನಾಳೆ ಯಡಿಯೂರಪ್ಪ ವಿಶ್ವಾಸಮತ

ಸೋಮವಾರ ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದರು. ಅದರಂತೆ ನನ್ನ ಕಾರ್ಯದರ್ಶಿಯ ಮೂಲಕ ಎಲ್ಲ ಶಾಸಕರಿಗೂ ಕರೆ ಕಳಿಸಲಾಗಿದೆ ಎಂದು ರಮೇಶ್‌ ಕುಮಾರ್ ಹೇಳಿದರು.

‘ನಾಳೆಯ ಅಧಿವೇಶನದಲ್ಲಿ ಯಡಿಯೂರಪ್ಪ ಅವರ ವಿಶ್ವಾಸಮತ ಯಾಚನೆ, ಧನ ವಿನಿಯೋಗ ಮಸೂದೆಯ ಚರ್ಚೆ, ಪರಿಶೀಲನೆ ಮತ್ತು ಮತಕ್ಕೆ ಹಾಕುವ ಪ್ರಕ್ರಿಯೆಗಳು ನಡೆಯಲಿವೆ. ಧನವಿನಿಯೋಗ ಮಸೂದೆಯು ಜುಲೈ 31ರ ಒಳಗೆ ಸದನದ ಅನುಮೋದನೆ ಮತ್ತು ರಾಜ್ಯಪಾಲರ ಸಹಿ ಪಡೆಯಬೇಕು. ಇಲ್ಲದಿದ್ದರೆ ಆಡಳಿತ ಸ್ಥಗಿತಗೊಳ್ಳುತ್ತದೆ’ ಎಂದು ತಿಳಿಸಿದರು.

ಜೈಪಾಲರೆಡ್ಡಿ ನೆನೆದು ಕಣ್ಣೀರಿಟ್ಟ ಸ್ಪೀಕರ್

ಇದು ನನಗೆ ಅತ್ಯಂತ ಖೇದದ ದಿನ. ನನ್ನ ಹಿರಿಯ ಸೋದರರಂತಿದ್ದ ಜೈಪಾಲ್ ರೆಡ್ಡಿ ನಿಧನರಾಗಿದ್ದಾರೆ. ನನಗೆ ತೀವ್ರ ಬೇಸರವಾಗಿದೆ. ಅವರು ಒಬ್ಬ ಒಳ್ಳೆಯ ಮನುಷ್ಯ, ಸಂಸದೀಯಪಟು ಆಗಿದ್ದರು ಎಂದು ರಮೇಶ್‌ಕುಮಾರ್ ನೆನೆದರು.

ಪಕ್ಷಾಂತರ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಮಂಡನೆಯಾದಾಗ ಜೈಪಾಲ್ ರೆಡ್ಡಿ ಮನದ ಮಾತುಗಳನ್ನು ಹೇಳಿದ್ದರು. ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ, ಮುಧುಲಿಮೆ, ಮೋಹನ್ ಕುಮಾರ್ ಮಂಗಳಂ, ಇಂದ್ರಜಿತ್ ಗುಪ್ತ, ಚಂದ್ರಜಿತ್ ಯಾದವ್, ಜಾರ್ಜ್ ಫರ್ನಾಂಡಿಸ್ ಅವರಂಥವರನ್ನು ನೆನೆಯಬೇಕು. ಅಬ್ದುಲ್ ನಜೀರ್ ಸಾಬ್, ಬಿ.ಎ.ಮೊಯಿದ್ದೀನ್, ಎ.ಕೆ.ಸುಬ್ಬಯ್ಯ ಅವರಂಥವರಿಂದ ನಾನು ಪ್ರಭಾವಿತನಾಗಿದ್ದೇನೆ.

Leave a Reply

Your email address will not be published. Required fields are marked *

error: Content is protected !!