ಕಾಪು: ಪ್ರವಾಸಕ್ಕೆ ಬಂದ ಮೂವರು ಮಕ್ಕಳು ಸಮುದ್ರಪಾಲು- ಓರ್ವನ ರಕ್ಷಣೆ
ಕಾಪು: ಪ್ರವಾಸಕ್ಕೆಂದು ಕಾಪು ಬೀಚ್‌ಗೆ ಆಗಮಿಸಿದ್ದ ಕುಟುಂಬದ ಮೂವರು ಮಕ್ಕಳು ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ ಘಟನೆ ಸಂಭವಿಸಿದೆ. ಈ ಪೈಕಿ ಓರ್ವನನ್ನು ರಕ್ಷಿಸಲಾಗಿದ್ದು, ಇಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ದಾವಣಗೆರೆಯ ಜಿಯಾವುಲ್ಲ ಹಾಗೂ ಅವರ ಸಂಬಂಧಿಕರ ಒಟ್ಟು 10ರಿಂದ 12 ಕುಟುಂಬಗಳ ಸದಸ್ಯರು ಪ್ರವಾಸದ ನಿಮಿತ್ತ ಕಾಪು ಬೀಚ್‌ಗೆ ಆಗಮಿಸಿದ್ದರು. ಸಂಜೆ ಸುಮಾರು 4:30ರ ವೇಳೆಗೆ ಕುಟುಂಬದ ಮಕ್ಕಳು ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ಇಸಾಕ್, ಸಮೀರ್ ಭಾಷಾ ಹಾಗೂ ಮಲ್ಲಿಕ್ ರಿಯಾನ್ ಎಂಬುವವರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಇಸಾಕ್‌ನನ್ನು ರಕ್ಷಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, 20 ವರ್ಷದ ಸಮೀರ್ ಭಾಷಾ ಹಾಗೂ 15 ವರ್ಷದ ಮಲ್ಲಿಕ್ ರಿಯಾನ್ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿಯ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.





