ಧರ್ಮನಿಷ್ಠನಾಗಿದ್ದರೆ ದೇವರ ಅನುಗ್ರಹ ಪ್ರಾಪ್ತಿ : ಮಾಣಿಲಶ್ರೀ
ಬಂಟ್ವಾಳ: ಮನಸ್ಸಿನ ಸಂಘರ್ಷ, ವೈಪರಿತ್ಯದಿಂದಾಗಿ ಈ ಮಣ್ಣಿನ ಸತ್ವ ನಮ್ಮ ದೇಹಕ್ಕೆ ಸಿಗುತ್ತಿಲ್ಲ, ನಾವು ಮತ್ತೊಬ್ಬರನ್ನು ಎಷ್ಟು ಪ್ರೀತಿಸುತ್ತೇವೋ ಅಷ್ಟೇ ದೇವರಿಗೂ ಹತ್ತಿರವಾಗಿರುತೇವೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಬಂಟ್ವಾಳ ಇದರ ಆಶ್ರಯದಲ್ಲಿ ಜಕ್ರಿಬೆಟ್ಟು ಶ್ರೀ ದಾಸ ರೈ ಮೈದಾನದಲ್ಲಿ ನಡೆದ 16 ನೇ ವರ್ಷದ ಶ್ರೀ ಗಣೇಶೋತ್ಸವದ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ನಾವು ನಡೆದು ಬಂದ ದಾರಿ ಧರ್ಮನಿಷ್ಟವಾಗಿದ್ದರೆ ದೇವರ ಅನುಗ್ರಹ ನಿತ್ಯ ನಮ್ಮ ಮೇಲೆ ಇರುತ್ತದೆ ಎಂದರು.
ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ರಮನಾಥ ರೈ ಪ್ರಾಸ್ತವಿಕವಾಗಿ ಮಾತನಾಡಿ ಸಾಮಾಜಿಕ ಸಾಮಾರಸ್ಯವನ್ನು ಗಟ್ಟಿಕೊಳಿಸುವ ನಿಟ್ಟಿನಲ್ಲಿ ಗಣೆಶೋತ್ಸವವನ್ನು ಆರಂಭಿಸಲಾಗಿದೆ. ಜಿಲ್ಲೆಯ ಗಣೇಶೋತ್ಸವಗಳ ಪೈಕಿ ಇಲ್ಲಿನ ಗಣೇಶೋತ್ಸವ ಅಗ್ರಪಂಕ್ತಿಯಲ್ಲಿದೆ. ತನ್ನ ಧರ್ಮದೊಂದಿಗೆ ಬೇರೆ ಧರ್ಮವನ್ನು ಪ್ರೀತಿಸುವವ ಎಂದೂ ಕೋಮುವಾದಿಯಾಗಲು ಸಾದ್ಯವಿಲ್ಲ ಎಂದರು. ನೆರೆ ಸಂತ್ರಸ್ತರಾದ ರಾಜ್ಯದ ಎಲ್ಲಾ ಜನರಿಗೂ ವಿಘ್ನನಾಶಕ ಕಷ್ಟವನ್ನು ದೂರಮಾಡಿ ಅವರ ಬದುಕಲ್ಲಿ ಹೊಸ ಬೆಳಕನ್ನು ಮೂಡಿಸಲಿ ಎಂದು ಅವರು ಆಶಿಸಿದರು.
ಉದ್ಯಮಿ ರಘುನಾಥ ಸೋಮಯಾಜಿ, ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಸುಧೀರ್ ಕುಮಾರ್ ಕೊಪ್ಪ ಅವರು ಮಾತನಾಡಿ ಜಕ್ರಿಬೆಟ್ಟು ಸಾರ್ವಜನಿಕ ಗಣೇಶೋತ್ಸವವು ದೇಶಕ್ಕೆ ಮಾದರಿ ನಿಂತಿದೆ. ಬೆವರು ಧರ್ಮದ ಭಾಗವಾಗಿದ್ದು,ಧ್ವೇಷದ ಮನೋಭಾವ ಬಿಟ್ಟು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬೆರೆಯಬೇಕು ಎಂದರು.
ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರು, ಉದ್ಯಮಿ ಸೇಸಪ್ಪ ಕೋಟ್ಯಾನ್ , ಸಮಿತಿಯ ಅಧ್ಯಕ್ಷ ಪದ್ಮಶೇಖರ ಜೈನ್ ,ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿದ್ದರು. ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜ ಭೇಟಿ ನೀಡಿದರು.ರಾಜೀವ ಎಡ್ತೂರು ಸ್ವಾಗತಿಸಿದರು. ಚೇತನ್ ರೈ ಮಾಣಿ ಕಾರ್ಯಕ್ರಮ ನಿರೂಪಿಸಿದರು.