ರಾಜ್ಯದಲ್ಲಿ ಈ ಬಾರಿ ರಣ ಬಿಸಿಲು, ಆದರೂ ಬೀಳಲಿದೆ ಮಳೆ: ಹವಾಮಾನ ಇಲಾಖೆ
ಬೆಂಗಳೂರು: ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಮಾರ್ಚ್ ನಿಂದ ಮೇ ವರೆಗೆ ರಾಜ್ಯದ ಉತ್ತರ ಒಳಭಾಗಗಳಲ್ಲಿ ಶಾಖವು ಹೆಚ್ಚಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆದಾಗ್ಯೂ, ಮಾರ್ಚ್ನಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ದಾಟದಿರಬಹುದು. ಇನ್ನು ಈ ತಿಂಗಳು ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದ್ದು ರಾಜ್ಯದ ಕೆಲವು ಭಾಗಗಳಲ್ಲಿ ಸುಡುವ ಶಾಖದಿಂದ ಜನರಿಗೆ ಇದು ಸ್ವಲ್ಪ ವಿರಾಮ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಉತ್ತರದ ಒಳಭಾಗಗಳಲ್ಲಿ ರಣಬಿಸಿಲಿಗೆ ಸಾಕ್ಷಿಯಾಗುವಸಾಧ್ಯತೆಯಿದೆ. ದಾಖಲೆಗಳ ಪ್ರಕಾರ, ಬೆಂಗಳೂರಿನಲ್ಲಿ 2005ರ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2016, 2017, 2018 ಮತ್ತು 2019 ರಲ್ಲಿ, ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ 34.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕಳೆದ ಮಂಗಳವಾರ ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಈ ವರ್ಷದ ಅತ್ಯಂತ ಹೆಚ್ಚು ತಾಪಮಾನದ ದಿನವಾಗಿದೆ. ಮಾರ್ಚ್ 2017ರಲ್ಲಿ, ಆ ತಿಂಗಳ ನಾಲ್ಕನೇ ವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. 2019ರಲ್ಲಿ, ಮಾರ್ಚ್ 8ರಂದು 37.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.
ತಾಪಮಾನ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಎಲ್ ನಿನೋ ಪರಿಣಾಮ ಸಹ ಇರಬಹುದು. ಮುಂಬರುವ ತಿಂಗಳು ಗಳಲ್ಲಿ ಎಲ್ ನಿನೋ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಬಹುಶಃ ಆರಂಭದಲ್ಲಿ ಮಾನ್ಸೂನ್ ಋತುವಿನಲ್ಲಿ ಅದು ತಟಸ್ಥವಾಗಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಅಂದರೆ, ಎಲ್ ನಿನೋ 0 ಮತ್ತು 0.5 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಆದರೆ ಈಗ ಅದು 1.5 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದರಿಂದಾಗಿ, ನಾವು ಸ್ಪಷ್ಟ ನೀಲಾಕಾಶವನ್ನು ಕಾಣುತ್ತಿದ್ದೇವೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಎ ಪ್ರಸಾದ್ ತಿಳಿಸಿದ್ದಾರೆ.
ಸದ್ಯ ನಾವು ಯಾವುದೇ ಮೋಡ ಕವಿದ ವಾತಾವರಣವನ್ನು ಹೊಂದಿಲ್ಲ. ಆದ್ದರಿಂದ, ತಾಪಮಾನವು ಏರುತ್ತಿದೆ. ಆದರೆ ಸಾಮಾನ್ಯ ಮಳೆಯ ಸಂಭವನೀಯತೆಯೂ ಇದೆ. ಫೆಬ್ರವರಿಯಲ್ಲಿ ಯಾವುದೇ ಮಳೆಯಾಗಲಿಲ್ಲ. ಮುಖ್ಯವಾಗಿ ಈ ಎಲ್ ನಿನೋ ಪರಿಸ್ಥಿತಿಯಿಂದಾಗಿ ಈ ಬಾರಿ ಬೇಸಿಗೆಯ ಆರಂಭದಲ್ಲಿ ನಡುಬೇಸಿಗೆಯಂತಹ ಪರಿಸ್ಥಿತಿಯನ್ನು ಹೊಂದಿದ್ದೇವೆ. ಮಾರ್ಚ್ನಲ್ಲಿ ಬೇಸಿಗೆ ಪ್ರಾರಂಭವಾದರೂ, ಕಳೆದ ಕೆಲವು ವರ್ಷಗಳಿಂದ ಅದರ ಪರಿಣಾಮ ಫೆಬ್ರವರಿಯಿಂದಲೇ ಅನುಭವಿಸುತ್ತಿದೆ. ಜಾಗತಿಕ ತಾಪಮಾನವೂ ಇದಕ್ಕೆ ಕಾರಣ ಎಂದರು.