ಲೋಕಸಭೆ ಚುನಾವಣೆಗೆ ‘ಕಾಂಗ್ರೆಸ್’ ಭರ್ಜರಿ ಸಿದ್ಧತೆ: 263 ಕೋಟಿ ರೂ.ವೆಚ್ಚದ ಎಲಿವೇಟೆಡ್ ಮೇಲ್ಸೇತುವೆ ಸಹಿತ ಹಲವು ಯೋಜನೆಗಳಿಗೆ ಹಸಿರು ನಿಶಾನೆ
ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಬೆಂಗಳೂರಿಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಸ್ ಬಳಿ ಎಲಿವೇಟೆಡ್ ಮೇಲ್ಸೇತುವೆಗೆ 263 ಕೋಟಿ ರೂಪಾಯಿ ಸೇರಿದಂತೆ ಹಲವು ಯೋಜನೆಗಳು ಮತ್ತು ಕಾಮಗಾರಿಗಳಿಗೆ ಹಸಿರು ನಿಶಾನೆ ತೋರಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ನೈಋತ್ಯ ರೈಲ್ವೆ ನೂತನವಾಗಿ ನಿರ್ಮಿಸಿರುವ ಸರ್ ಎಂ ವಿವೇಶ್ವರಯ್ಯ ಟರ್ಮಿನಸ್ ನಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದವರೆಗೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಹಲವು ಬೇಡಿಕೆಗಳಿದ್ದವು. ಇದರಂತೆ ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೊಸ ಸರ್ ಎಂವಿ ಟರ್ಮಿನಲ್ ಗೆ ಎಲಿವೇಟೆಡ್ ಮೇಲ್ಸೇತುವೆ ನಿರ್ಮಿಸಲು 263 ಕೋಟಿ ರೂ.ಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಹೇಳಿದರು.
ಮೇಲ್ಸೇತುವೆಯು ಲಕ್ಷಾಂತರ ಜನರ ಪ್ರಯಾಣಕ್ಕೆ ಸಹಾಯ ಮಾಡುತ್ತದೆ ಮತ್ತು ಸಂಚಾರ ದಟ್ಟಣೆಯನ್ನೂ ಕಡಿಮೆ ಮಾಡುತ್ತದೆ. “ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಐಒಸಿ ಜಂಕ್ಷನ್ನಲ್ಲಿ 1.5-ಕಿಮೀ ಉದ್ದದ ಮೇಲ್ಸೇತುವೆ ಮತ್ತು ಬೈಯಪ್ಪನಹಳ್ಳಿ ರೈಲ್ವೆಲೆವೆಲ್ ಕ್ರಾಸಿಂಗ್ನಲ್ಲಿ ಹೆಚ್ಚುವರಿ ದ್ವಿಪಥದ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣವನ್ನು ಪ್ರಸ್ತಾಪಿಸಲಾಗಿದೆ. ಈ ಮೇಲ್ಸೇತುವೆಯು ಕಮ್ಮನಹಳ್ಳಿ, ಬಾಣಸವಾಡಿ ಮತ್ತು ಹಳೆ ಮದ್ರಾಸ್ ರಸ್ತೆಯ ಜನರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.
ಮೂಲ ಸೌಕರ್ಯಗಳನ್ನು ಒದಗಿಸಲು ಮತ್ತು ವೈಟ್ ಟಾಪಿಂಗ್ ರಸ್ತೆಗಳಿಗೆ 1,200 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಂಪುಟ ಅನುಮೋದನೆ ನೀಡಿದೆ. ರಸ್ತೆಗಳ ಉದ್ದದ ಬಗ್ಗೆ ಬಿಬಿಎಂಪಿ ನಿರ್ಧರಿಸಲಿದೆ ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 208 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದಲ್ಲದೇ ಕೆಸಿ ಜನರಲ್ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 150 ಕೋಟಿ ರೂನ್ನು ಮೀಸಲಿಡಲಾಗಿದೆ ಎಂದರು.
ಇದಲ್ಲದೆ, ಸಂಪುಟ ಸಬೆ ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಸುಸ್ತಿದಾರರಾಗಿರುವ ರೈತರು ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದರೆ, ಬಡ್ಡಿ ಮನ್ನಾ ಮಾಡುವ ಯೋಜನೆಗೂ ಅನುಮೋದನೆ ನೀಡಿದೆ. ರೈತರು ಫೆಬ್ರುವರಿ 29ರೊಳಗೆ ಅಸಲು ಪಾವತಿಸಿದರೆ ಮಾತ್ರ ಬಡ್ಡಿ ಮನ್ನಾ ಆಗುತ್ತದೆ ಎಂದು ಪಾಟೀಲ್ ಅವರು ಮಾಹಿತಿ ನೀಡಿದರು.
2023ರ ಡಿಸೆಂಬರ್ 31ಕ್ಕೆ ಸುಸ್ತಿದಾರರಾದವರಿಗೆ ಈ ಪ್ರಯೋಜನ ಸಿಗಲಿದೆ. ಈ ಸಂಬಂಧ ಜನವರಿ 20ರಂದೇ ಆದೇಶ ಹೊರಡಿಸಲಾಗಿತ್ತು. ಇದೀಗ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ಗಳು (ಪಿಕಾರ್ಡ್) ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳಲ್ಲಿ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಸುಸ್ತಿ ಬಡ್ಡಿ ರೂ.440.20 ಕೋಟಿ ಆಗಲಿದ್ದು, ಅದನ್ನು ಭರಿಸಲು ಒಪ್ಪಿಗೆ ನೀಡಲಾಯಿತು ಎಂದರು.
34 ಸ್ಥಳೀಯ ಸಂಸ್ಥೆಗಳಲ್ಲಿ ಅನಿಲ ಆಧಾರಿತ ಚಿತಾಗಾರ: ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮತ್ತು ಆಯ್ದ 24 ನಗರಸಭೆಗಳಲ್ಲಿ ತಲಾ ಒಂದರಂತೆ 34 ಆಧುನಿಕ ಅನಿಲ /ವಿದ್ಯುತ್ ಚಿತಾಗಾರಗಳನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಅಡಿ ರೂ.136 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ.
ಶವಸಂಸ್ಕಾರ ನಡೆಸಲು ಆಧುನಿಕ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ಬಳಸಲು 1 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಹಾಗೂ ಹೆಚ್ಚಿನ ಮರಣದ ಪ್ರಮಾಣ ಇರುವ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮತ್ತು ಆಯ್ದ 24 ನಗರಸಭೆಗಳಲ್ಲಿ ಚಿತಾಗಾರಗಳನ್ನು ತಲಾ ರೂ.4 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ಪೊಲೀಸ್ ಇಲಾಖೆಯ ಪ್ರಧಾನ ಕಚೇರಿ ಸೇರಿ ಇತರ ಘಟಕಗಳಲ್ಲಿನ ವಾಹನಗಳಿಗೆ ಪೆಟ್ರೋ ಕಾರ್ಡ್ ಮೂಲಕ ಇಂಧನ ಮತ್ತು ತೈಲವನ್ನು ಮೂರು ವರ್ಷಗಳ ಅವಧಿಗೆ ₹170 ಕೋಟಿ ಅಂದಾಜು ವೆಚ್ಚದಲ್ಲಿ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಸಂಪುಟ ಸಭೆಯ ಇತರೆ ಪ್ರಮುಖ ತೀರ್ಮಾನಗಳು…
- ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ರೂ.142.47 ಕೋಟಿಗೆ ಒಪ್ಪಿಗೆ
- 2023–24ನೇ ಸಾಲಿಗೆ 93 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿನ 104 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಒಟ್ಟು ರೂ.60 ಕೋಟಿ ವೆಚ್ಚದಲ್ಲಿ ಕಲಿಕಾ ವಾತಾವರಣ ಅಭಿವೃದ್ಧಿಗೆ ಅನುಮೋದನೆ
- ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹೊಸ ವೈದ್ಯಕೀಯ ಕಾಲೇಜು, ಪುರುಷ ಮತ್ತು ಮಹಿಳಾ ಹಾಸ್ಟೆಲ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಸತಿ ನಿಲಯ ಕಾಮಗಾರಿಗಳ ರೂ.455 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ
- ರಾಜ್ಯ 6 ಐಟಿಐಗಳನ್ನು ರೂ.100 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಒಪ್ಪಿಗೆ
- ರಾಯಚೂರು ವಿಶ್ವವಿದ್ಯಾಲಯ ಆವರಣದಲ್ಲಿ ರೂ.42 ಕೋಟಿ ವೆಚ್ಚದಲ್ಲಿ ‘ಕಲ್ಯಾಣ ಕರ್ನಾಟಕ ಮಾನವ ಜಿನೋಮ್ ಅಧ್ಯಯನ ಸಂಸ್ಥೆ’ ನಿರ್ಮಾಣಕ್ಕೆ ಅನುಮೋದನೆ
- ನಬಾರ್ಡ್ ಆರ್ಐಡಿಎಫ್–29 ನೆರವಿನೊಂದಿಗೆ ರಾಜ್ಯದ 6 ಜಿಲ್ಲೆಗಳಲ್ಲಿ 6 ಬಹುಉತ್ಪನ್ನ ಶೀತಲ ಗೃಹಗಳನ್ನು ರೂ.65.97 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ
- ಬೆಳಗಾವಿ ತಾಲ್ಲೂಕಿನ ಉಚ್ಛಗಾಂವ್ ಹಾಗೂ ಸಂತಿಬಸ್ತವಾಡ ಹೋಬಳಿಯ 20 ಕೆರೆಗಳನ್ನು ತುಂಬಿಸುವ ₹287.55 ಕೋಟಿ ಅಂದಾಜು ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
- ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 61 ಕೆರೆಗಳನ್ನು ತುಂಬಿಸುವ ಯೋಜನೆಯ ರೂ.519.10 ಕೋಟಿಗಳ ಅಂದಾಜು ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಅಡಳಿತ್ಮಾಕ ಅನುಮೋದನೆ
- ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವತಿಯಿಂದ ಕಲಬುರಗಿ ಮತ್ತು ಮೈಸೂರಿನಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳನ್ನು ಕ್ರಮವಾಗಿ ರೂ.49.50 ಕೋಟಿ, ರೂ.49.80 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ. ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರ ಕಚೇರಿ ಮತ್ತು ಅದರಲ್ಲಿಯೇ ಅತ್ಯಾಧುನಿಕ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ರೂ.49.75 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಒಪ್ಪಿಗೆ
- ರಾಯಚೂರು ತಾಲ್ಲೂಕು ಚಿಕ್ಕಮಂಚಾಲಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ರೂ.158 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ರೂ.158.10 ಕೋಟಿಗಳ ವಿವರವಾದ ಯೋಜನಾ ವರದಿಗೆ ಒಪ್ಪಿಗೆ. ಆಂಧ್ರಪ್ರದೇಶ ರಾಜ್ಯದ ಒಪ್ಪಿಗೆ ಪಡೆಯುವ ಷರತ್ತಿಗೆ ಒಳಪಟ್ಟು ಅನುಮತಿ ನೀಡಲಾಗಿದೆ
- ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಸುಟ್ಟಗಾಯಗಳ ಚಿಕಿತ್ಸಾ ಘಟಕಗಳನ್ನು ರೂ.31.54 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮತಿ. ಹಾವೇರಿ ವೈದ್ಯಕೀಯ ವಿಜ್ಞಾನಗಳ ಕಟ್ಟಡ ಕಾಮಗಾರಿಗಳ ಪರಿಷ್ಕೃತ ಅಂದಾಜು ಮೊತ್ತ ರೂ.499 ಕೋಟಿಗೆ ಒಪ್ಪಿಗೆ