ಶಾಲೆಗಳನ್ನು ತೆರೆದರೆ ಕೊರೋನಾ ಸ್ಪೋಟವಾಗುತ್ತೆ: ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು: ಕೊರೋನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು. ರಾಜ್ಯದ ಎಲ್ಲಾ ಮಕ್ಕಳಿಗೂ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಈಗಿನ ಪರಿಸ್ಥಿತಿಯಲ್ಲಿ ಅತ್ಯಗತ್ಯ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಸಂಬಂಧ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಶಾಲೆಗಳನ್ನು ಆರಂಭಿಸಿದರೆ ಕೊರೋನಾ ಸೋಂಕು ಸ್ಪೋಟಗೊಂಡು ಸುನಾಮಿ ಸ್ವರೂಪದ ಸಾವು ನೋವುಗಳನ್ನು ಸಮಾಜ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಅಮೆರಿಕಾ ಮತ್ತು ಯುರೋಪಿನ ಕೆಲವು ದೇಶಗಳು ಶಾಲೆಗಳನ್ನು ತೆರೆದು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಂಡಿರುವ ಉದಾಹರಣೆಗಳು ಕಣ್ಣ ಮುಂದೆ ಇವೆ ಎಂದಿದ್ದಾರೆ.
ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿವೆ ಎಂಬ ನಿಮ್ಮ ಮಾತಿನಲ್ಲಿ ಅನುಮಾನಗಳಿಲ್ಲ. ಆದರೆ ಜಿಲ್ಲಾಡಳಿತಗಳು ನಿದ್ದೆಯಿಂದ ಎಚ್ಚೆತ್ತು ಕ್ರಿಯಾಶೀಲವಾದರೆ. ಕುಟುಂಬಗಳಿಗೆ ದುಡಿಯುವ ಅವಕಾಶಗಳನ್ನು ಸರ್ಕಾರವು ಹೆಚ್ಚಿಸಿ ಅವರ ಕೈತುಂಬಾ ಹಣ ಇರುವಂತೆ ನೋಡಿಕೊಂಡರೆ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ ಎಂದಿದ್ದಾರೆ.
ಒಂದು ಸಮಸ್ಯೆಯನ್ನು ಎದುರಿಸಲು ಮಕ್ಕಳನ್ನು ಯಮನ ಬಾಯಿಗೆ ತಳ್ಳುವುದನ್ನು ಯಾವ ಸೂಕ್ಷ್ಮಮತಿಯಾದ ಮನುಷ್ಯನಿಂದಲೂ ಊಹಿಸಿಕೊಳ್ಳಲಾಗದು. ಸರ್ಕಾರದ ನಿರ್ಲಕ್ಷ್ಯದಿಂದ ಮತ್ತು ತಪ್ಪು ನಿರ್ಧಾರಗಳ ಕಾರಣದಿಂದಾಗಿ ಮೃತಪಟ್ಟ ಮಗುವಿನ ಸಾವು ಅದು ಕೇವಲ ಸಾವು ಆಗಿರುವುದಿಲ್ಲ, ಸಮಾಜ ನಡೆಸಿದ ಕಗ್ಗೂಲೆಯಾಗುತ್ತದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡಿ ಮುಂದಿನ ತರಗತಿಗಳಿಗೆ ಕಳುಹಿಸಬೇಕು. ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೊಮ್ಮೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸಬಹುದು ಎಂದು ಸಲಹ ನೀಡಿದ್ದಾರೆ.
ಕೊರೋನಾ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ಉಳಿದೆಡೆಗಿಂತ ಕರ್ನಾಟಕದಲ್ಲಿ ಭೀಕರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪರೀಕ್ಷೆ ಸಂಖ್ಯೆ ಹೆಚ್ಚಿಸಿದಂತೆಲ್ಲಾ ಪ್ರಕರಣಗಳ ಸಂಖ್ಯೆಯೂ ಹೆಚ್ಚು ಪತ್ತೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ತಜ್ಞರ ಮಾತುಗಳ ಪ್ರಕಾರ ಈ ವರ್ಷ ಜೀವ ಉಳಿಸಿಕೊಳ್ಳಬೇಕೇ ಹೊರತು ಉಳಿದೆಲ್ಲವನ್ನು ನಗಣ್ಯವೆಂದು ಭಾವಿಸಬೇಕು. ಹಿಂದೆ ವಿವಿಧ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಸ್ವತ: ನಾನೇ ಬೆಂಬಲಿಸಿದ್ದೆ. ಆದರೆ ಇಂದಿನ ಪರಿಸ್ಥಿತಿಯೆ ಬೇರೆಯಾಗಿದೆ. ಅಂಕಿ ಅಂಶಗಳನ್ನು ತಿರುಚುವ ಮೂಲಕ ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಸರ್ಕಾರದ ಬೆನ್ನನ್ನು ಜನರು ತಟ್ಟಬೇಕೇ ಹೊರತು ಸರ್ಕಾರವೇ ತಟ್ಟಿಕೊಂಡರೆ ಹಾಸ್ಯಾಸ್ಪದವಾಗುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರದ ದಾಖಲೆಗಳ ಪ್ರಕಾರ 10 ವರ್ಷದೊಳಗಿನ 20,256 ಮಕ್ಕಳು ಮತ್ತು 11 ರಿಂದ 20 ವರ್ಷದೊಳಗಿನ 47,061 ಮಕ್ಕಳು ಈಗಾಗಲೇ ಕೊರೋನಾ ಸೋಂಕಿತರಾಗಿದ್ದಾರೆ. ಈ ಎರಡೂ ಗುಂಪಿನಿಂದ 61 ಮಕ್ಕಳು ಮೃತಪಟ್ಟಿದ್ದಾರೆ. ಸರ್ಕಾರ ಕೊರೋನಾ ಸಾವುಗಳ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಮುಚ್ಚಿಡುತ್ತಿದೆ ಎಂಬ ಮಾಹಿತಿ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ 99 ಜನ ಮೃತ ಪಟ್ಟಿದ್ದಾರೆಂದು ಸರ್ಕಾರ ಹೇಳುತ್ತಿದೆ. ನನಗಿರುವ ಅಧಿಕೃತ ಮಾಹಿತಿಯ ಪ್ರಕಾರ ದೊಡ್ಡಬಳ್ಳಾಪುರ ಒಂದರಲ್ಲೆ ಇಷ್ಟು ಜನರು ಮರಣ ಹೊಂದಿದ್ದಾರೆ. ಹೊಸಕೋಟೆಯಲ್ಲಿ ಸುಮಾರು 80 ಜನ, ನೆಲಮಂಗಲದಲ್ಲಿ 40 ಜನ, ದೇವನಹಳ್ಳಿಯಲ್ಲಿ 50 ಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಕುರಿತು ನಿಮಗೆ ನಂಬಿಕೆ ಇಲ್ಲದಿದ್ದರೆ ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ಕೇಳಿ ನೋಡಿ ಸತ್ಯ ಗೊತ್ತಾಗುತ್ತದೆ. ಆಸ್ಪತ್ರೆಗೆ ಹೋಗಲು ಭಯಭೀತರಾಗಿ ಕಾಯಿಲೆ ಪತ್ತೆಯಾಗದೇ ಮೃತಪಟ್ಟವರ ಸಂಖ್ಯೆ ಎಷ್ಟು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ