ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವೇ ಸೋಂಕು ಹೆಚ್ಚಾಗಲು ಕಾರಣ: ಸಿದ್ದರಾಮಯ್ಯ

ಬೆಂಗಳೂರು: ‍‍‍ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸೋಂಕಿನಲ್ಲಿ ಭಾರತವನ್ನು ವಿಶ್ವದ ನಂಬರ್ 1 ದೇಶವನ್ನಾಗಿಸುವ ಧಾವಂತದಲ್ಲಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕವನ್ನು ದೇಶದ ನಂಬರ್ 1 ಮಾಡುವ ಉತ್ಸಾಹದಲ್ಲಿದ್ದಾರೆ. ಈ ಇಬ್ಬರು ನಾಯಕರು ಕೊರೊನಾಕ್ಕಿಂತಲೂ ಅಪಾಯಕಾರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ರಾಜ್ಯದಲ್ಲಿ ಪ್ರತಿದಿನ ಸರಾಸರಿ 10,000 ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ. ಸರಾಸರಿ 100  ಜನ ಸಾಯುತ್ತಿದ್ದಾರೆ. ಇಲ್ಲಿಯವರೆಗೆ 6.79 ಲಕ್ಷ ಜನರಿಗೆ ಸೋಂಕು ತಗಲಿದ್ದು, 1.17 ಲಕ್ಷಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಕ್ಕೆ ಕೊರೊನಾ ಸೋಂಕು ಬಡಿದಂತಹ ಪರಿಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.

ಕೊರೊನಾ ಉಲ್ಭಣಗೊಳ್ಳಲು ಜನರ ನಿರ್ಲಕ್ಷ್ಯ ಕಾರಣ ಎಂದು ಹೇಳುತ್ತಿರುವ ಯಡಿಯೂರಪ್ಪ, ಕೊರೊನಾ ನಿಯಂತ್ರಣದಲ್ಲಿನ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಆಡಳಿತ ವೈಫಲ್ಯದಿಂದಾಗಿ ಖಾಲಿಯಾಗಿರುವ ಖಜಾನೆ ತುಂಬಿಸಲು ಮದ್ಯದಂಗಡಿಯಿಂದ ಮಾಲ್‌ವರೆಗೆ, ದೇವಸ್ಥಾನಗಳಿಂದ ಹೊಟೇಲ್‌ಗಳವರೆಗೆ ಎಲ್ಲವನ್ನು ತೆರೆದಿಟ್ಟು ಜನರನ್ನು ಕೈಬೀಸಿ ಕರೆಯುತ್ತಿರುವ ರಾಜ್ಯ ಸರ್ಕಾರ, ಕೊರೊನಾ ಉಲ್ಭಣಗೊಳ್ಳಲು ಜನರೇ ಕಾರಣ ಎಂದು ದೂಷಿಸುತ್ತಿರುವುದು ಜನರಿಗೆ ಬಗೆಯುತ್ತಿರುವ ದ್ರೋಹ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ರಾಜ್ಯ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವೇ ಸೋಂಕು ಹೆಚ್ಚಾಗಲು ಕಾರಣ. ಕೊರೊನಾ ನಿಯಂತ್ರಣವು ಜನರ ಸೇವೆ ಮಾಡಲು ಅವಕಾಶ ಎಂದು ಭಾವಿಸದ ಯಡಿಯೂರಪ್ಪ 
ನೇತೃತ್ವದ ಸಚಿವ ಸಂಪುಟದ ಸದಸ್ಯರು ಇದು ದುಡ್ಡು ಮಾಡಲು ಒದಗಿಬಂದ ಸುವರ್ಣಾವಕಾಶ ಎಂದು ತಿಳಿದದ್ದೇ ಇಂದಿನ ದುಸ್ಥಿತಿಗೆ ಕಾರಣ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸತ್ಯನಿಷ್ಠವಾಗಿ ಜನರ ಮುಂದಿಡುವ ಧೈರ್ಯ ಮುಖ್ಯಮಂತ್ರಿಗೆ ಇದೆಯೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!