ರಾಜಾಪುರ ಸಾರಸ್ವತ ಮಹಿಳೆಯರಿಂದ ಬನ್ನಿ ನೇಜಿ ನಡೋಣ
ಉಡುಪಿ :ಮಣಿಪಾಲದ ರಾಜಾಪುರ ಸಾರಸ್ವತ ಮಹಿಳಾ ವೇದಿಕೆಯ ವತಿಯಿಂದ ಭಾನುವಾರ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ಯವಾ ನೇಜಿ ಲಾವ್ಯ (ಬನ್ನಿ ನೇಜಿ ನಡೋಣ)
ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೇದಿಕೆಯ ಅದ್ಯಕ್ಷೆ ಮೋಹಿನಿ ಎನ್.ನಾಯಕ್ ಅವರ ನೇತೃತ್ವದಲ್ಲಿ ವೇದಿಕೆಯ ಸದಸ್ಯರೆಲ್ಲರೂ ಸೇರಿ ಸುರಿಯುವ ಮಳೆಯಲ್ಲಿಯೇ ಪಾಡ್ದನ ಹಾಡಿ, ಗದ್ದೆಯಲ್ಲಿ ನೇಜಿ (ಬತ್ತದ ಸಸಿ)ಗಳನ್ನು ನೆಟ್ಟು ತಮ್ಮ ಹಿರಿಯರ ಶ್ರಮ ಸಂಸ್ಕೃತಿಯನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಮಧ್ಯಾಹ್ನ ಕಲಾಯಿಗುತ್ತಿನ ಮನೆಯವರಿಂದ ಗ್ರಾಮೀಣ ಪ್ರದೇಶಗಳ ಖಾದ್ಯದ ಊಟೋಪಚಾರವನ್ನು ವ್ಯವಸ್ಥೆಮಾಡಲಾಗಿತ್ತು. ಕುಚ್ಚಲಕ್ಕಿಯ ಅನ್ನದ ಜೊತೆಗೆ ಉದ್ದಿನ ಚಟ್ನಿ, ಮಾವಿನ ಚಟ್ನಿ, ಕಣಿಲೆ ಸುಕ್ಕ, ಹುರುಳಿ ಸಾರು, ಹಲಸಿನ ಪಲ್ಯ, ಹೆಬ್ಬಲಸಿನ ಗಸಿ, ಸಂಡಿಗೆ, ಹಲಸಿನ ಹಪ್ಪಳ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ನೀಡಿತು.