ಮತ್ತೆ ಯಡಿಯೂರಪ್ಪ ಬಹುಮತ ಸಾಬೀತಲ್ಲಿ ಎಡವುತ್ತಾರಾ ?
ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಿದ್ದು ನೂತನ ಸರ್ಕಾರ ರಚನೆಯಾದರೂ ದೋಸ್ತಿಗಳ ಅಧಿಕಾರದ ಕನಸು ಹಾಗೆ ಇದೆಯಾ ಅನ್ನೋ ಅನುಮಾನವೊಂದು ಇದೀಗ ಮೂಡಿದೆ.
ಸೋತಂತೆ ನಟಿಸಿದ್ದ ದೋಸ್ತಿಗಳು ಒಳಗೊಳಗೆ ಯಡಿಯೂರಪ್ಪಗೆ ಖೆಡ್ಡಾ ತೋಡುತ್ತಿದ್ದಾರೆ. ಈ ಮೂಲಕ ಪ್ರಮಾಣವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಿದ ಯಡಿಯೂರಪ್ಪ ಬಹುಮತ ಸಾಬೀತಲ್ಲಿ ಎಡವುತ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಬಂಡಾಯ ಶಾಸಕರಿಬ್ಬರು ಕರೆ ಮಾಡಿದ ಬೆಳವಣಿಗೆ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ವೇದಿಕೆಯಾಗಿದೆ. ಆತ್ಮ ವಿಶ್ವಾಸದಲ್ಲಿದ್ದ ಬಿಜೆಪಿ ನಾಯಕರು ನಮ್ಮೊಂದಿಗೆ ಇರುವ ಬಂಡಾಯಗಾರರ ಪೈಕಿ ಯಾರು ಕೈ ಕೊಡ್ತಾರೆ, ಯಾರು ವಿರೋಧಿ ಪಾಳಯ ಸೇರ್ತಾರೆ ಅನ್ನೋ ಆತಂಕಕ್ಕೆ ಒಳಗಾಗುವಂತಾಗಿದೆ.ಇತ್ತ ಬಂಡಾಯ ಶಾಸಕರನ್ನ ಲೆಕ್ಕದಿಂದ ಕೈ ಬಿಟ್ಟು ಅವರ ವಿರುದ್ಧ ಅನರ್ಹತೆಯ ಸಮರ ಸಾರಿದ್ದ ದೋಸ್ತಿ ಪಾಳಯ, ಈ ಹೊಸ ಬೆಳವಣಿಗೆಯಿಂದ ಹೊಸ ನಿರೀಕ್ಷೆಯೊಂದಿಗೆ ಲೆಕ್ಕಾಚಾರ ಆರಂಭಿಸಿದೆ. ಸಿದ್ದರಾಮಯ್ಯರಿಗೆ ಕರೆ ಮಾಡಿ ಮಾತನಾಡಿಸಲು ಯತ್ನಿಸಿದ್ದ ಶಾಸಕರು ವಾಪಾಸ್ ಬಂದರೆ ಬಿಜೆಪಿಯ ವಿರುದ್ಧ ಯಾವ ಅಸ್ತ್ರ ಬೇಕಾದರು ಬಳಸಬಹುದು ಎಂದು ಹೇಳಲಾಗುತ್ತಿದೆ.
ಸರ್ಕಾರ ರಚಿಸಿದ ಯಡಿಯೂರಪ್ಪ ಯಾವ ಕ್ಷಣದಲ್ಲಿ ಬೇಕಾದರೂ ಬಹುಮತ ಸಾಬೀತಿನಲ್ಲಿ ಎಡವಬಹುದು. ಹೀಗೆ ಕೈ ಕೊಟ್ಟು ಹೋದ ಶಾಸಕರನ್ನ ಯಾವ ಕಾರಣಕ್ಕೂ ವಾಪಾಸ್ ಸೇರಿಸಲ್ಲ ಎನ್ನುತ್ತಿದ್ದ ದೋಸ್ತಿಗಳು, ಶಾಸಕರ ಫೋನ್ ಕಾಲ್ ನಂತರ ಒಳಗೊಳಗೆ ಹೊಸ ಲೆಕ್ಕಾಚಾರ ಆರಂಭಿಸಿದ್ದಾರೆ.
ಮೈತ್ರಿ ನಾಯಕ ಈ ಲೆಕ್ಕಾಚಾರ ದೋಸ್ತಿಗಳನ್ನ ಮತ್ತೆ ಅಧಿಕಾರದ ಗದ್ದುಗೆ ಏರಿಸುತ್ತಾ, ಇಲ್ಲಾ ಬಿಜೆಪಿ ನಾಯಕರ ಅಧಿಕಾರದ ಕನಸನ್ನ ನುಚ್ಚುನೂರು ಮಾಡುತ್ತಾ ಎಂಬುದೇ ಸದ್ಯದ ಕುತೂಹಲವಾಗಿದೆ.