ಅನರ್ಹಗೊಂಡ ಶಾಸಕರು ಮತ್ತೆ ಎಲೆಕ್ಷನ್‍ಗೆ ನಿಲ್ಲುವಂತಿಲ್ಲ- ಸ್ಪೀಕರ್ ಸ್ಪಷ್ಟನೆ

ಬೆಂಗಳೂರು: ಈಗಾಗಲೇ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.

ಸುದ್ದಿವಾಹಿನಿಯೊಂದರ ಜೊತೆಗೆ ಮಾತನಾಡಿದ ಸ್ಪೀಕರ್, ಈ ಮೂವರು ಶಾಸಕರು ವಿಧಾನಸಭೆ ಅವಧಿ ಮುಗಿಯೋವರೆಗೆ ಅಂದರೆ 2023ರ ಮೇ ತಿಂಗಳವರೆಗೆ ಉಪಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾಗಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂಬ ಚುನಾವಣಾ ಆಯೋಗದ ಅಭಿಪ್ರಾಯ ತಪ್ಪು ಎಂದು ಹೇಳಿದ್ದಾರೆ.

ತಪ್ಪು ಮಾಡಿ ರಾಜೀನಾಮೆ ಕೊಟ್ಟು ಬಚಾವ್ ಆಗಲು ಸಾಧ್ಯವಿಲ್ಲ. ನೀವು ತಪ್ಪು ಮಾಡಿದ್ದೀರಿ. ನಾನು ರಾಜೀನಾಮೆ ಅಂಗೀಕರಿಸಲ್ಲ. ಪ್ರತಿಯೊಂದು ರಾಜೀನಾಮೆಯೂ ಬೇರೆ ಬೇರೆ ಪ್ರಕರಣವಾಗಿದೆ. ಹೀಗಾಗಿ ಪ್ರತಿಯೊಬ್ಬ ಶಾಸಕರ ರಾಜೀನಾಮೆ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದೇನೆ. ಇನ್ನು ನಾಲ್ಕೈದು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಆದರೆ ಇದೀಗ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್ ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಗುತ್ತದೆ ಎಂದು ಅತೃಪ್ತ ಶಾಸಕರೊಬ್ಬರು  ವಿಶ್ವಾಸ ವ್ಯಕ್ತಪಡಿಸಿದ್ದರು. ಜೊತೆಗೆ ನಮ್ಮ ರಾಜೀನಾಮೆ ಅಂಗೀಕರಿಸದೆ, ನಮ್ಮನ್ನೂ ಅನರ್ಹಗೊಳಿಸಿದರೆ, ನಾವೂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಎಚ್ಚರಿಸಿದ್ದರು.

ತಮಿಳುನಾಡಿನಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅಲ್ಲಿ ಶಾಸಕರು ರಾಜೀನಾಮೆ ಕೊಟ್ಟ 6 ತಿಂಗಳೊಳಗೆ ಅಂದರೆ ಆ ಸಮಯದಲ್ಲಿ ವಿಧಾನಸಭಾ ಅವಧಿ ಕೂಡ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅನರ್ಹಗೊಂಡವರು ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಈ ವಿಧಾನಸಭೆ ಅವಧಿ ಮುಗಿಯಲು ಇನ್ನೂ 3 ವರ್ಷ 10 ತಿಂಗಳು ಇರುವುದರಿಂದ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಸ್ಪೀಕರ್ ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!