ಮತದಾರರಿಗೆ ಆಮಿಷ ನೀಡಿದರೆ ಕಠಿಣ ಕ್ರಮ : ಡಿಸಿ ಎಚ್ಚರಿಕೆ
ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ , ಮತದಾರರಿಗೆ ಉಚಿತ ವಾಹನ ಸೌಕರ್ಯ, ಸಾಮಥ್ರ್ಯಕ್ಕಿಂತ ಹೆಚ್ಚು ಜನರ ಸಾಗಾಟ ಮುಂತಾದ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಸಂಬಂದಪಟ್ಟ ವಾಹನವನ್ನು ಸ್ಥಳದಲ್ಲೇ ಸೀಜ್ ಮಾಡಿ, ವಾಹನ ಚಾಲಕರು, ವಾಹನಗಳ ಮಾಲೀಕರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾದಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಕೆ ನೀಡಿದ್ದಾರೆ.
ಅವರು ಭಾನುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಜಿಲ್ಲೆಯ ಖಾಸಗಿ ಬಸ್ ಸಂಘ, ಆಟೋರಿಕ್ಷಾ ಚಾಲಕ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕ ಮಾಲೀಕರ ಸಂಘ ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮತದಾನದ ದಿನದಂದು ಯಾವುದೇ ಅಭ್ಯರ್ಥಿ, ಪಕ್ಷದ ಪರವಾಗಿ ಮತದಾರರನ್ನು ಉಚಿತವಾಗಿ ಮತಗಟ್ಟೆಗೆ ತಲುಪಿಸುವುದು, ಮತಗಟ್ಟೆಯ ಬಳಿ ತೆರಳಿ ನಿಲ್ಲುವುದು, ಸಾಮರ್ಥಕ್ಕಿಂತ ಅಧಿಕ ಜನರ ಸಾಗಾಟ ಮಾಡುವುದು ಕಂಡು ಬಂದಲ್ಲಿ ಕೂಡಲೇ ವಾಹನವನ್ನು ಸೀಜ್ ಮಾಡಿ , ಪರವಾನಿಗಿ ಅಮಾನತು , ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡಲಾಗುವುದು ಮತ್ತು ಸಂಬಂದಪಟ್ಟ ವಾಹನ ಚಾಲಕ ಮತ್ತು ಮಾಲೀಕರ ವಿರುದ್ದ , ಮೋಟಾರು ವಾಹನ ಕಾಯಿದೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ ಡಿಸಿ ಅವರು ಈ ಮಾಹಿತಿಯನ್ನು ತಮ್ಮ ಸಂಘಗಳ ಮೂಲಕ ಎಲ್ಲಾ ಪದಾಧಿಕಾರಿಗಳಿಗೆ ತಲುಪಿಸಿ, ಯಾವುದೇ ಕಾರಣಕ್ಕೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬೇಡಿ ಎಂದು ಸೂಚಿಸಿದರು.
ಮತದಾನ ದಿನದಂದು ವಾಹನ ಚಾಲಕರು , ತಮ್ಮ ವಾಹನಕ್ಕೆ ಸಂಬಂದಪಟ್ಟ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು, ಅಧಿಕಾರಿಗಳು ಪರಿಶೀಲನೆಗೆ ನೀಡಿದಲ್ಲಿ ನೀಡಿ ಸಹಕರಿಸಬೇಕು, ಮತಗಟ್ಟೆಯ 200 ಮೀ ಒಳಗೆ ವಾಹನ ಪ್ರವೇಶ ಮಾಡಬಾರದು, ಈಗಾಗಲೇ ಮತಗಟ್ಟೆಯ 200 ಮೀ ಒಳಗೆ ರಿಕ್ಷಾ , ಟ್ಯಾಕ್ಸಿ ಸ್ಟ್ಯಾಂಡ್ ಇದ್ದಲ್ಲಿ ಅವುಗಳನ್ನು ತಾತ್ಕಾಲಿವಾಗಿ ಮುಚ್ಚಬೇಕು, ವಾಹನಗಳ ಮೇಲೆ ನೀತಿ ಸಂಹಿತೆ ಉಲ್ಲಂಘನೆಯಾಗುವ, ಯಾವುದೇ ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳ ಸ್ಟಿಕರ್ ಅಳವಡಿಸಿದಲ್ಲಿ ಸಹ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿ, ಈ ಎಲ್ಲಾ ನಿಯಮಗಳು ಖಾಸಗಿ ವಾಹನಗಳೂ ಸೇರಿದಂತೆ ಎಲ್ಲಾ ವಾಹನಗಳಿಗೂ ಅನ್ವಯವಾಗಲಿದೆ ಎಂದು ಹೇಳಿದರು.
ಮತದಾರರೂ ಸಹ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ನೀಡುವ ಉಚಿತ ಪ್ರಯಾಣದ ಆಮಿಷಗಳಿಗೆ ಒಳಗಾಗದಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ರೀತಿ ಉಚಿತ ಆಮಿಷ ನೀಡಿ ಮತದಾರರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಲ್ಲಿ ಸೀ ವಿಜಿಲ್ ಆಪ್ ಮೂಲಕ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಸಹ ಮಾಹಿತಿ ನೀಡಿದಲ್ಲಿ ಸಂಬಂದಪಟ್ಟವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲಾ ಖಾಸಗಿ ವಾಹನಗಳ ಚಾಲಕರು ಮತದಾನ ಮಾಡಲು ಜಿಲ್ಲಾಡಳಿತವತಿಯಿಂದ ನೀಡಿರುವ ಇಡಿಸಿ ಯನ್ನು ಬಳಕೆ ಮಾಡಿಕೊಂಡು, ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ಹಾಗೂ ವಿವಿಧ ವಾಹನ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.