ಭ್ರೂಣಲಿಂಗ ಪತ್ತೆ ಮಾಡಿದಲ್ಲಿ ಕಠಿಣ ಕಾನೂನು ಕ್ರಮ- ಡಾ.ಪ್ರತಾಪ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡುವ
ಸುಳಿವು ಸಿಕ್ಕಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು, ಇದರ ಮಾಹಿತಿ ನೀಡಿದವರಿಗೆ 50,000 ರೂ. ಬಹುಮಾನ ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾ ಪಿಸಿ & ಪಿಎನ್‍ಡಿಟಿ ಸಲಹಾ ಸಮಿತಿ ಅಧ್ಯಕ್ಷ ಡಾ.ಪ್ರತಾಪ್‍ಕುಮಾರ್ ತಿಳಿಸಿದರು.


ಅವರು ಬುಧವಾರ ಜಿಲ್ಲಾ ಮಟ್ಟದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ. ಅದಾಗಿಯೂ ಆಸ್ಪತ್ರೆ ಅಥವಾ ಕ್ಲಿನಿಕ್‍ಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡುವ ಪ್ರಕರಣಗಳು ಸಾಕ್ಷಿ ಸಮೇತ ಕಂಡುಬಂದಲ್ಲಿ ವೈದ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಅಂತಹ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ಮಾನ್ಯತೆಗಳನ್ನು ರದ್ದುಗೊಳಿಸಲಾಗುವುದು. ಭ್ರೂಣಲಿಂಗ ಪತ್ತೆ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕುಟುಕು ಕಾರ್ಯಾಚರಣೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.


ಭ್ರೂಣಲಿಂಗ ಪತ್ತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಈಗಾಗಲೇ ಭಿತ್ತಪತ್ರಗಳನ್ನು ತಯಾರಿಸಲಾಗಿದ್ದು, ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದೆ ಮತ್ತು ಭ್ರೂಣ ಲಿಂಗ ಪತ್ತೆ ಮಾಡುವುದಿಲ್ಲ ಎನ್ನುವ ಭಿತ್ತಿಪತ್ರಗಳನ್ನು ಸ್ಕಾನಿಂಗ್ ಸೆಂಟರ್‍ನ ರೋಗಿಗಳು ಕುಳಿತು ಕೊಳ್ಳುವ ಸ್ಥಳದ ಸಮೀಪ ಫಲಕವನ್ನು ಕಡ್ಡಾಯವಾಗಿ ಲಗತ್ತಿಸಲು ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಿಸಿ & ಪಿಎನ್‍ಡಿಟಿ ಸಲಹಾ ಸಮಿತಿಯ ಡಾ. ಪಾರ್ವತಿ ಭಟ್, ಡಾ.ಸುನಿಲ್ ಸಿ. ಮುಡ್ಕೂರ್ ಡಿಸಿಹೆಚ್ ಡಿಎನ್ ಬಿ ಶಿಶುತಜ್ಞ ಕೆಎಂಸಿ ಮಣಿಪಾಲ, ಸ್ತ್ರೀರೋಗ ತಜ್ಞೆ ಹಾಗೂ ಡಿಐಎಂಸಿ ಸದಸ್ಯೆ ಡಾ.ವಿಜಯಾ ವೈಬಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!