ಯೋಗ್ಯ ನಾಗರಿಕರನ್ನು ಬೆಳೆಸುವ ಶಕ್ತಿ ಶಿಕ್ಷಕರಿಗೆ ಇದೆ:ಶ್ರೀನಿವಾಸ ಪೂಜಾರಿ

ಉಡುಪಿ: ಶಿಕ್ಷಕರಿಗೆ ಇಂದಿನ ಸಮಾಜದಲ್ಲಿ ಯೋಗ್ಯ ನಾಗರಿಕರನ್ನು ಬೆಳೆಸುವ ಅವಶ್ಯಕತೆ, ಅನಿವಾರ್ಯತೆ ಮತ್ತು ಶಕ್ತಿ ಇದೆ. ಎಂಜಿನಿಯರ್‌, ಡಾಕ್ಟರ್‌, ರಾಜಕಾರಣಿಗಳಿಂದ ಈ ಕಾರ್ಯ ಅಸಾಧ್ಯ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು .


ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣಾ ಸಮಿತಿ ಹಾಗೂ ಜಿ. ಶಂಕರ್‌ ಫ್ಯಾಮಿಲಿ
ಟ್ರಸ್ಟ್‌ ಸಹಯೋಗದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಶಿಕ್ಷಕರ ದಿನಾಚರಣೆ ಅಂದರೆ ಶಿಕ್ಷಕರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಶ್ರಮದ
ಸಾರ್ಥಕತೆಯನ್ನು ನೆನಪು ಮಾಡಿಕೊಳ್ಳುವ ದಿನ. ಹಿಂದೆ ಶಿಕ್ಷಣ ಎನ್ನುವುದು ಕೆಲವರಿಗೆ
ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಶಿಕ್ಷಣದ ಮಟ್ಟ ಉತ್ತಮವಾಗಿದ್ದರೂ, ಮಕ್ಕಳಿಗೆ
ಯಾವ ರೀತಿಯ ಶಿಕ್ಷಣ ಕೊಡಬೇಕು ಹಾಗೂ ಶಿಕ್ಷಣ ನೀತಿಯನ್ನು ಯಾವ ರೀತಿ ರೂಪಿಸಬೇಕು ಎಂಬುವುದರ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ಇಲ್ಲ ಎಂದರು.


ಪ್ರಾಥಮಿಕ ಶಿಕ್ಷಣವನ್ನು ಆಂಗ್ಲ ಮಾಧ್ಯಮ ಜತೆಗೆ ಕೊಂಡೊಯ್ಯಬೇಕಾ?. ಅಲ್ಲದೆ,
ನ್ಯಾಯಾಲಯ ಹೇಳಿರುವಂತೆ ‘ಮಕ್ಕಳಿಗೆ ಯಾವ ಶಿಕ್ಷಣ ಕೊಡಬೇಕೆಂಬುವುದನ್ನು ಪೋಷಕರಿಗೆ ಬಿಡಬೇಕಾ?’. ಮತ್ತೊಂದೆಡೆ ಕನ್ನಡ ಭಾಷೆ ಹಾಗೂ ಶಾಲೆಗಳನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಕೆಲ ಯೋಜನೆಗಳನ್ನು ರೂಪಿಸುತ್ತಿದೆ. ಹಾಗಾಗಿ ಈ ಎಲ್ಲ ಸಮಸ್ಯೆಗಳ ನಡುವೆ ಶಿಕ್ಷಣ ಇದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.


ಬರವಣಿಗೆ ಪರೀಕ್ಷೆಯಲ್ಲಿ ಪಾಸಾದವರೆಲ್ಲ ಬದುಕಿನ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯವಾ?. ಅಥವಾ ಬದುಕಿನ ಪರೀಕ್ಷೆಯಲ್ಲಿ ಪಾಸಾಗುವಂತಹ ಬರವಣಿಗೆ ಪರೀಕ್ಷೆಯನ್ನು ಸೃಷ್ಟಿ ಮಾಡಿದ್ದೇವಾ? ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತ ಕಡ್ಡಾಯ ವರ್ಗಾವಣೆ, ಹಿಂಬಡ್ತಿ–ಮುಂಬಡ್ತಿ, ಮಕ್ಕಳಿಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆ ಹಾಗೂ ದೈಹಿಕ ಶಿಕ್ಷಕರ ಕೊರತೆ ಇಂತಹ ಹಲವಾರು ಸಮಸ್ಯೆಗಳಿವೆ.


ಅಲ್ಲದೆ, ಕೆಲವೊಂದು ಶಾಲೆಗಳಲ್ಲಿ ಮೂಲಭೂತ ಸೌಕರ್ಯ, ಸಮವಸ್ತ್ರ, ಪಠ್ಯಪುಸ್ತಕ,
ಬಿಸಿಯೂಟ ವಿತರಣೆಯಲ್ಲಿ ತೊಂದರೆ ಆಗುತ್ತಿದೆ. ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು
ಸಮಸ್ಯೆಗಳಿದ್ದು, ಅದನ್ನು ಪರಿಹಾರ ಮಾಡಲೇ ಬೇಕಾದ ಅನಿವಾರ್ಯತೆಯೂ ಇದೆ. ಆದ್ದರಿಂದ ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಬಗೆಹರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಸಚಿವರು ತಿಳಿಸಿದರು.


ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಮಾಡಿದರು. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್‌ ಜಿಲ್ಲಾ ಸಾಧಕ
ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ
ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನೀತಾ
ಗುರುರಾಜ ಪೂಜಾರಿ, ಜಿಪಂ ಸದಸ್ಯೆ ಶಿಲ್ಪಾ ಸುವರ್ಣ, ಜಿಲ್ಲಾಧಿಕಾರಿ ಜಿ. ಜಗದೀಶ್‌,
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಡಯಟ್‌ ಪ್ರಾಂಶುಪಾಲ ಚಂದ್ರಶೇಖರ್‌, ವಿವಿಧ
ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳಾದ ಕಿರಣ್‌ ಹೆಗ್ಡೆ, ಚಂದ್ರಶೇಖರ್‌ ಶೆಟ್ಟಿ,
ರವೀಂದ್ರ ಹೆಗ್ಡೆ, ಮಂಗಳಾ, ಅರುಣ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಸ್ವಾಗತಿಸಿದರು.

ಶಿಕ್ಷಕರು ಸಮಾಜದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳಿಗೆ ಉತ್ತಮ
ಸಂಸ್ಕಾರ, ಸಂಸ್ಕೃತಿಯನ್ನು ನೀಡುವಲ್ಲಿ ಅವರ ಜವಾಬ್ದಾರಿ ಮಹತ್ತರವಾಗಿದೆ. ಹಿಂದಿನ
ಸರ್ಕಾರ ಶಿಕ್ಷಕರ ವರ್ಗಾವಣೆ ಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ ಆ ನಂತರ ಬಂದ
ಸರ್ಕಾರ ಅದನ್ನು ರದ್ದುಗೊಳಿಸಿತು. ಹಾಗಾಗಿ ಸರ್ಕಾರಕ್ಕೆ ಶಿಕ್ಷಕರ ಬಗ್ಗೆ ಕನಿಷ್ಠವಾದ
ಪ್ರಾಮಾಣಿಕತೆ ಇರಬೇಕು. ಅವರನ್ನು ಸರ್ಕಾರ ಬದಲಾದಂತೆ ಫುಟ್ಬಾಲ್‌ ಆಟದ ರೀತಿ ಆ
ಕಡೆಯಿಂದ ಈ ಕಡೆಗೆ ಒದಿಯಬಾರದು. ಗಂಡ ಹೆಂಡತಿಯನ್ನು ಒಂದು ಮಾಡುವಂತಹ ಉತ್ತಮವಾದ ವರ್ಗಾವಣೆ ನೀತಿಯನ್ನು ಈಗಿನ ಸರ್ಕಾರ ಜಾರಿಗೊಳಿಸಬೇಕು ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್‌ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!