ಬ್ರಹ್ಮಾವರ: 19 ಮತ್ತು 20 ರಂದು ಕೃಷಿ ಮೇಳ
ಬ್ರಹ್ಮಾವರ: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ಬ್ರಹ್ಮಾವರ ಉಳ್ಳಾಲದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ, ಕೃಷಿ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇದೇ 19 ಮತ್ತು 20 ರಂದು ಎರಡು ದಿನಗಳ ಕಾಲ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮೇಳ 2019 ನಡೆಯಲಿದೆ ಎಂದು ನಿರ್ದೇಶಕ ಎಸ್.ಯು ಪಾಟೀಲ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೂತನ ಕೃಷಿ ತಂತ್ರಜ್ಞಾನ ನೋಡಿ ತಿಳಿಯುವುದು, ಚರ್ಚಾ ಗೋಷ್ಠಿಗಳ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು, ಕ್ಷೇತ್ರ ಭೇಟಿಗಳ ಮುಖಾಂತರ ಬೆಳೆ ಪ್ರಾತ್ಯಕ್ಷಿಕೆ ನೋಡಿ ಅಲ್ಲಿಯ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು, ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ವಿವಿಧ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಹಾಗೂ ಉಪಕರಣಗಳ ಬಗೆಗಿನ ಸಂಪೂರ್ಣ ಮಾಹಿತಿ ಇತ್ಯಾದಿಗಳನ್ನು ಸ್ಥಳದಲ್ಲೇ ಒದಗಿಸುವುದು, ಕೃಷಿ ಮೇಳದ ಮುಖ್ಯ ಉದ್ದೇಶ. ಒಟ್ಟಾರೆ ಈ ಕೃಷಿ ಮೇಳ ಕೃಷಿಕರ ಹಬ್ಬವಾಗಿದ್ದು, ಅನ್ನದಾತನ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರವನ್ನು ಕಲ್ಪಿಸುವುದಾಗಿದೆ ಎಂದರು.
ಇದೇ 19 ರಂದು ಕೃಷಿ ಸಚಿವ ಲಕ್ಷ್ಮಣ ಸವದಿ ಕೃಷಿ ಮೇಳ ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ವಸ್ತು ಪ್ರದರ್ಶನ ಉದ್ಘಾಟಿಸುವರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ನೂತನ ಭತ್ತದ ತಳಿ ಸಹ್ಯಾದ್ರಿ ಪಂಚಮುಖಿ ತಳಿ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಗೇರು ಮತ್ತು ಇತರ ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಮತ್ತು 20 ರಂದು ಲಾಭದಾಯಕ ಸಮಗ್ರ ಕೃಷಿ ಪದ್ಧತಿಗಳು ಹಾಗೂ ನೆಲ, ಜಲ, ಸಂರಕ್ಷಣೆ ಮತ್ತು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಹೈ-ಟೆಕ್ ತೋಟಗಾರಿಕೆ ಎಂಬ ವಿಚಾರ ಸಂಕಿರಣಗಳು ನಡೆಯಲಿವೆ. ವಿಚಾರ ಸಂಕಿರಣಗಳಲ್ಲಿ ಇಲಾಖಾ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ವಿವಿಧ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮತ್ತು ಪ್ರಗತಿಪರ ಕೃಷಿಕರು ವಿಷಯ ತಜ್ಞರಾಗಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಕೃಷಿ ಮೇಳದಲ್ಲಿ 200 ಕ್ಕೂ ಅಧಿಕ ಮಳಿಗೆಗಳು ಇರಲಿವೆ. ಕೃಷಿ ತಂತ್ರಜ್ಞಾನಗಳ ಮತ್ತು ಕೃಷಿ ಪರಿಕರಗಳ ವಸ್ತು ಪ್ರದರ್ಶನಗಳನ್ನು ಮಳಿಗೆಗಳಲ್ಲಿ ನೋಡಬಹುದು ಎಂದು ಹೇಳಿದರು.
ಕೃಷಿ ಮೇಳದ ವಿಶೇಷ ಆಕರ್ಷಣೆ
ವಿವಿಧ ಭತ್ತದ ತಳಿಗಳು ಮತ್ತು ಬೀಜೋತ್ಪಾದನೆ, ಭತ್ತದಲ್ಲಿ ಚಾಪೆ ನೇಜಿ ತಯಾರಿ ಮತ್ತು ಶ್ರೀಪದ್ಧತಿ ಬೇಸಾಯ, ತೆಂಗಿನಲ್ಲಿ ಬಹುಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆ, ತೋಟಗಾರಿಕಾ ಬೆಳೆಗಳಲ್ಲಿ ಕಸಿ ಕಟ್ಟುವಿಕೆ, ಛಾವಣಿ ಕೈತೋಟ ಮತ್ತು ಮಾಡಹಾಗಲ ಪ್ರಾತ್ಯಕ್ಷಿಕೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆ ಗೊಬ್ಬರ ಮತ್ತು ಅಜೋಲಾ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ, ಹೈನುಗಾರಿಕೆ, ಮೀನುಗಾರಿಕೆ, ಆಡು, ಮೊಲ, ಕೋಳಿ, ಹಂದಿ ಮತ್ತು ಬಾತುಕೋಳಿ ಸಾಕಾಣಿಕೆ ಪ್ರಾತ್ಯಕ್ಷಿಕೆ, ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಮೇವಿನ ಬೆಳೆ ಉತ್ಪಾದನೆ, ಸಿಒ 4 ಮತ್ತು 5 ಮೇವಿನ ಹುಲ್ಲಿನ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದನಾ ಘಟಕಗಳ ವೀಕ್ಷಣೆ, ಮೌಲ್ಯಾಧಾರಿತ ಆಹಾರ ಉತ್ಪನ್ನಗಳು ಮತ್ತು ಪ್ರಾತ್ಯಕ್ಷಿಕೆ, ಅಲಂಕಾರಿಕ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಆಕರ್ಷಕ ಕೃಷಿ ವಸ್ತು ಪ್ರದರ್ಶನವಿರಲಿದೆ
ReplyForward |