ಪ್ರಧಾನಿ ಮೋದಿ ಭೇಟಿ ಬಗ್ಗೆ ಅಸಮಾಧಾನ ಹೊರಹಾಕಿದ ಎಸ್ ಪಿ ಬಾಲಸುಬ್ರಹ್ಮಣ್ಯಂ
ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ವ್ಯಾಪಕ ಸುದ್ದಿಯಾಗಿತ್ತು. ಅಲ್ಲಿ ಬಾಲಿವುಡ್ ಕಲಾವಿದರು ಸೇರಿ ಪ್ರಧಾನಿ ಜೊತೆ ಸಂವಾದ ನಡೆಸಿ ಸೆಲ್ಫಿ, ಫೋಟೋಗಳನ್ನು ತೆಗೆಸಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಕಲಾವಿದರನ್ನು ಆಹ್ವಾನಿಸಲಿಲ್ಲ, ಪ್ರಧಾನ ಮಂತ್ರಿ ಮೋದಿಯವರು ದಕ್ಷಿಣ ಭಾರತೀಯ ಕಲಾವಿದರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಕೂಗು ಕೇಳಿ ಬಂದಿತ್ತು. ಅನೇಕರು ಈ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇದೀಗ ಖ್ಯಾತ ಹಿನ್ನಲೆ ಗಾಯಕ, ಗಾನ ಗಂಧರ್ವ ಡಾ.ಎಸ್ ಪಿ ಬಾಲಸುಬ್ರಮಣ್ಯಂ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಎಲ್ಲೆಡೆ ವ್ಯಾಪಕ ಸುದ್ದಿಯಾಗುತ್ತಿದೆ.
ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಪಿ.ಬಿಯೂ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ, ಖುಷಿಕೊಟ್ಟಿತು ಎಂದ ಖ್ಯಾತ ಗಾಯಕರು ನಂತರ ಬೇಸರದ ವಿಷಯವನ್ನು ಹೊರಹಾಕಿದ್ದಾರೆ.
ಪ್ರಧಾನಿ ನಿವಾಸಕ್ಕೆ ಪ್ರವೇಶಿಸುವಾಗ ಎಸ್ ಪಿಬಿಯವರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಸೆಲ್ ಫೋನ್ ಬಿಟ್ಟು ಹೋಗಿ ಎಂದು ಹೇಳಿ ಟೋಕನ್ ಕೊಟ್ಟರಂತೆ. ಆದರೆ ಒಳಗೆ ಹೋಗಿ ನೋಡುವಾಗ ಬಾಲಿವುಡ್ ಸ್ಟಾರ್ಸ್ ಗಳೆಲ್ಲೆಲ್ಲ ಮೊಬೈಲ್ ಇದೆ, ಪ್ರಧಾನಿಯವರ ಜೊತೆ ಬೇಕಾದಷ್ಟು ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಪಡುತ್ತಿದ್ದರಂತೆ. ಎಸ್ ಪಿ ಬಿಗೆ ಮಾತ್ರ ಮೋದಿ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ಅವಾಕಶ ಸಿಕ್ಕಿಲ್ಲ. ಈ ತಾರತಮ್ಯವೇಕೆ ಎಂಬರ್ಥದಲ್ಲಿ ಎಸ್.ಪಿ.ಬಿ ತಮ್ಮ ಬೇಸರ ಹೊರಹಾಕಿದ್ದಾರೆ