ರೆಪೊ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಯಥಾಸ್ಥಿತಿ ಮುಂದುವರಿಕೆ: ಆರ್’ಬಿಐ ವಿತ್ತೀಯ ನೀತಿ ಪ್ರಕಟ

ಮುಂಬೈ: 2020-2021ರ ಆರ್ಥಿಕ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇಕಡಾ 9.5ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಪ್ರಸಕ್ತ ತ್ರೈಮಾಸಿಕದ ವಿತ್ತೀಯ ನೀತಿಯನ್ನು ಇಂದು ಮುಂಬೈಯಲ್ಲಿ ಪ್ರಕಟಿಸಿದ ಅವರು, ರೆಪೊ ದರ ಬದಲಾಗದೆ ಶೇಕಡಾ 4ರಷ್ಟೇ ಮುಂದುವರಿಯಲಿದೆ. ರಿವರ್ಸ್ ರೆಪೊ ದರ ಕೂಡ ಬದಲಾಗದೆ ಶೇಕಡಾ 3.35ರಷ್ಟು ಮುಂದುವರಿಯಲಿದೆ ಎಂದರು.

ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ಬಡ್ಡಿದರವನ್ನು ಬದಲಾಯಿಸದೆ ಕಳೆದ ತ್ರೈಮಾಸಿಕ ದರದಲ್ಲಿಯೇ ಮುಂದುವರಿಸುವಂತೆ ಸದಸ್ಯರು ಒಲವು ತೋರಿಸಿದರು. ದೇಶದ ಆರ್ಥಿಕ ಬೆಳವಣಿಗೆಗೆ ಸದ್ಯಕ್ಕೆ ಇದುವೇ ಸೂಕ್ತ ನಿರ್ಧಾರ ಎಂದು ತೀರ್ಮಾನಕ್ಕೆ ಬರಲಾಯಿತು ಎಂದು ಹೇಳಿದರು.

ವಿತ್ತೀಯ ನೀತಿ ಸಮಿತಿಗೆ(ಎಂಪಿಸಿ) ಅಶಿಮ ಗೋಯಲ್, ಜಯಂತ್ ಆರ್ ವರ್ಮ ಮತ್ತು ಶಶಾಂಕ ಭಿಡೆ ಅವರು ಮೊನ್ನೆ 7ರಂದು ಹೊಸದಾಗಿ ಸೇರ್ಪಡೆಗೊಂಡಿದ್ದು ಹೊಸ ಸದಸ್ಯರ ಆಗಮನದ ನಂತರ ಇಂದು ಮೊಟ್ಟಮೊದಲ ಸಭೆ ನಡೆಯಿತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇಕಡಾ 9.5ರಷ್ಟು ಕುಸಿತ ಕಾಣಬಹುದು ಎಂದು ಸಹ ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 23.9ರಷ್ಟು ಕಡಿಮೆಯಾಗಿತ್ತು. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಆರ್ಥಿಕತೆ ನಿರ್ಣಾಯಕ ಹಂತ ತಲುಪಿದೆ. ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿಯೇ ದೇಶದ ಆರ್ಥಿಕತೆಯ ಕುಸಿತ ನಮ್ಮ ಕಣ್ಣೆದುರಿಗೆ ಇದ್ದು, ನಂತರ ಸ್ವಲ್ಪ ಪರಿಸ್ಥಿತಿ ಸುಧಾರಿಸಿತು, ಉತ್ಪಾದನೆ, ಇಂಧನ ವೆಚ್ಚ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಚೇತರಿಕೆ ಕಂಡುಬರುತ್ತಿದೆ, ಮುಂದಿನ ಜನವರಿಯಿಂದ ಮಾರ್ಚ್ ವರೆಗೆ ತ್ರೈಮಾಸಿಕದಲ್ಲಿ ಆರ್ಥಿಕತೆ ಇನ್ನಷ್ಟು ಸುಧಾರಣೆಯತ್ತ ಕಾಣಬಹುದು ಎಂದರು.

ಹಣದುಬ್ಬರ: ವಾರ್ಷಿಕ ಹಣದುಬ್ಬರವನ್ನು ಮುಂದಿನ ವರ್ಷ ಮಾರ್ಚ್ ವರೆಗೆ ಶೇಕಡಾ 4ರಷ್ಟು ಕಡ್ಡಾಯವಾಗಿ ನಿರ್ವಹಿಸಲು ತೀರ್ಮಾನಿಸಿದೆ.ಚಿಲ್ಲರೆ ಹಣದುಬ್ಬರ ಇತ್ತೀಚಿನ ತಿಂಗಳುಗಳಲ್ಲಿ ಶೇಕಡಾ 6ಕ್ಕಿಂತ ಹೆಚ್ಚಾಗಿದೆ. ಎರಡೂ ಕಡೆ ಶೇಕಡಾ 2ನ್ನು ಬಿಟ್ಟು ಶೇಕಡಾ 4ಕ್ಕೆ ನಿಲ್ಲಿಸಲು ತೀರ್ಮಾನಿಸಲಾಗಿದೆ.

ಕೊರೋನಾ ವೈರಸ್ ವೇಗವಾಗಿ ಹಬ್ಬುತ್ತಿರುವುದು ಮತ್ತು ಲಾಕ್ ಡೌನ್ ಹೇರಿಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ.

Leave a Reply

Your email address will not be published. Required fields are marked *

error: Content is protected !!