ಪರಿಶಿಷ್ಟ ಜಾತಿಗೆ ಶೇ.20 ಮೀಸಲಾತಿ ಏರಿಸಿ: ದಲಿತ ಸಂಘರ್ಷ ಸಮಿತಿ
ಉಡುಪಿ: ಪರಿಶಿಷ್ಟ ಜಾತಿಯವರ ಜನಸಂಖ್ಯೆ ಗಣನೀಯವಾಗಿ ಏರಿಕೆ ಆಗಿರುವುದರಿಂದ ಈ ವರ್ಗದ ಮೀಸಲಾತಿಯನ್ನು ಶೇ.20ಕ್ಕೆ ಏರಿಸುವಂತೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರದಾನ ಸಂಚಾಲಕ ಸುಂದರ್ ಮಾಸ್ತರ್ ಆಗ್ರಹಿಸಿದರು. ಶನಿವಾರ ಪ್ರೆಸ್ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಜಾತಿಯಲ್ಲಿ ಅಸ್ಪ್ರಶ್ಯ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3 ಹಿಂದುಳಿದ ಅಲ್ಪಸಂಖ್ಯಾತ ವರ್ಗಕ್ಕೆ ಶೇ.32 ಮೀಸಲಾತಿ ನೀಡಲಾಗುತ್ತಿದೆ. ದೇಶದ ಒಟ್ಟು ಜನ ಸಂಖ್ಯೆ ಹಾಗು ರಾಜ್ಯದ ಜನಸಂಖ್ಯೆಯಲ್ಲಿ ಶೇ.30 ರಷ್ಟಿರುವ ಪರಿಶಿಷ್ಟ ಜಾತಿಗಳಿಗೆ ಈವರೆಗೆ ಮೀಸಲಾತಿ ಹೆಚ್ಚಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೀಗ ರಾಜ್ಯದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಪ್ರಕಾರ ಈ ವರ್ಗದ ಜನಸಂಖ್ಯೆ ಹೆಚ್ಚಾಗಿದ್ದರೂ ವರದಿ ಬಿಡುಗಡೆ ಮಾಡುತ್ತಿಲ್ಲ ಎಂದರು. ಈಗಿರುವ ಶೇ.15 ರನ್ನು ಶೇ.17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7ಕ್ಕೆ ಏರಿಸಿರುವುದು ಅವೈಜ್ಞಾನಿಕ, ಅಸಂವಿಧಾನಿಕ. ಜಸ್ಟೀಸ್ ನಾಗಮೋಹನ್ ದಾಸ್ ಅವರ ಅವರ ವರದಿ ಅಪೂರ್ಣವಾಗಿದೆ. ಪರಿಶಿಷ್ಟ ಜಾತಿ ಅವರಿಗೆ ಹೆಚ್ಚಿಸಿರುವ ಶೇ.2 ಮೀಸಲಾತಿ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಅಸ್ಪ್ರಶ್ಯರಲ್ಲದ ಜಾತಿಗಳಿಗೆ ಮೀಸಲಾತಿಗೆ ವಿರೋಧ ಕರಾವಳಿ ಜಿಲ್ಲೆ ಇತರೆ ಕಡೆಗಳಲ್ಲಿ ಅಸ್ಪ್ರಶ್ಯರಲ್ಲದ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬಾರದು ಎಂದು ಸುಂದರ್ ಮಾಸ್ತರ್ ಹೇಳಿದರು. ಇದೀಗ ಒತ್ತಾಯಿಸುತ್ತಿರುವ ಜಾತಿಗಲು ವರ್ಣಾಶ್ರಮ ಸಂಪ್ರದಯ, ನೂರಾರು ಉದ್ಯಮಿ, ಬ್ಯಾಂಕ್ ಸಹಕಾರಿ ಸಂಸ್ಥೆಗಳನ್ನು ನಡೆಸುತ್ತಿವೆ. ಅವರು ಎಂದಿಗೂ ಅಸ್ಪ್ರಶ್ಯರಾಗಿವುದಿಲ್ಲ. ಅಂತ ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಸಬಾರದು. ಕೇಂದ್ರ ಸರ್ಕಾರ ಇತ್ತೀಚೆಗೆ ಮೇಲ್ವರ್ಗಕ್ಕೆ ಶೇ.10 ಮೀಸಲಾತಿ ಮಾಡಿರುವುದು ಸಂವಿಧಾನಬಾಹಿರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ ಉಪ್ಪೂರು, ಮಂಜುನಾಥ ಬಾಳ್ಕುದ್ರು, ಶ್ಯಾಮರಾಜ ಬಿರ್ತಿ, ಪ್ರದಾನ ಸಂಚಾಲಕ ಶಂಕರ್ದಾಸ್, ಶಿವನಂದ ಮೂಡುಬೆಟ್ಟು ಸುದ್ದಿಗೋಷ್ಠಿಯಲ್ಲಿದ್ದರು.