ನೈಜ ಕಥೆಯಾಧಾರಿತ ಸಂತು ಲವ್ಸ್ ಸಂಧ್ಯಾ – ಮುಹೂರ್ತ
ನಾಲ್ಕು ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ನಡೆದ ನೈಜ ಘಟನೆಯೊಂದು ಚಲನಚಿತ್ರವಾಗಿ ಮೂಡಿಬರುತ್ತಿದೆ. ಸಂತು ಲವ್ಸ್ ಸಂಧ್ಯಾ ಎಂಬ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಘಟನೆ ನಡಟೆಸ ಸ್ಥಳವಾದ ಮುಳಬಾಗಿಲಿನ ಸಮೀಪದ ಯಲ್ದೂರು ಗ್ರಾಮದ ಗಂಗಾ ಭವಾನಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು. ಚಿತ್ರದ ಆರಂಭಿಕ ದೃಶ್ಯಕ್ಕೆ ನಿವೃತ್ತ ಅರಣ್ಯಾಧಿಕಾರಿ ಕೆಂಪಣ್ಣ ಕ್ಯಾಮೆರಾ ಚಾಲನೆ ಮಾಡಿದಸರೆ, ನಿರ್ಮಾಪಕ ಶಿವಕುಮಾರ್ ಆರಂಭ ಫಲಕ ತೋರಿದರು.
ಆರ್.ಕೆ. ಗಾಂಧಿ ಈ ಚಿತ್ರಕ್ಕೆ ಕತೆ, ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಹಸ ಕಲಾವಿದನಾಗಿ ರಥಾವರ, ರಾಟೆ, ಒಡೆಯ, ಮುತ್ತಿನಹಾರ ಸೇರಿದಂತೆ ಅರವತ್ತೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಜೈಸುಬ್ರಮಣಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಪ್ರೇಮಿಗಳ ನಡುವೆ ಜಾತಿ ಎಂಬ ವಿಷಯ ಬಂದಾಗ ಅದು ಎಂತಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಈ ಘಟನೆಯ ರಿಯಲ್ ನಾಯಕ ವೆಂಕಟ್ ಈಗಲೂ ಯಲ್ದೂರು ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನಾಗಿ ಅಲೆದಾಡುತ್ತಿದ್ದಾನೆ.
ಮನೋಜ್ ಮೂವಿ ಮೇಕರ್ಸ್ ಲಾಂಛನದಲ್ಲಿ ಶಿವಕುಮಾರ್, ದೇವರಾಜ್, ಶಬರೀಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪೌಲ್ ರಾಜು ಛಾಯಾಗ್ರಹಣ, ಗಂಟಾಡಿ ಕೃಷ್ಣ ಸಂಗೀತ, ಸುರೇಶ್ ಕಂಬಳಿ ಸಾಹಿತ್ಯ, ಶಂಕರ್ ಸಾಹಸ, ಸಾನ್ವಿ ನೃತ್ಯ ನಿರ್ದೇಶನ, ವಿನಯ್ ಜಿ. ಆಲೂರು ಸಂಕಲನವಿದೆ. ಜೈ ಸುಬ್ರಮಣಿ, ಸುಶ್ಮಾ ಗೌಡ, ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ, ಜ್ಯೋತಿ ಮೂರೂರು, ಕಾವ್ಯ ಪ್ರಕಾಶ್, ದಿಂಬಾಲ ಅಶೋಕ್, ಕೋಲಾರ ಬಾಬು, ಮಹೇಶ್ ಬ್ರೂಸ್ಲಿ, ತಿರುಪತಿ ರಾಜು, ನಾಗರಾಜ್ ಮುಂತಾದವರ ತಾರಾಬಳಗವಿದೆ.