ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸ್ಥಿರತೆಯ ಕೊರತೆಯಿದೆ: ಶರದ್ ಪವಾರ್
ಪುಣೆ: ರಾಷ್ಟಮಟ್ಟದ ನಾಯಕನಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಲ್ಲಿ ಸ್ವಲ್ಪಮಟ್ಟಿಗೆ ಸ್ಥಿರತೆಯ ಕೊರತೆ ಕಾಣಿಸುತ್ತಿದೆ ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ದೇಶ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಒಪ್ಪಲು ಸಿದ್ಧವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪವಾರ್, ಈ ವಿಷಯದಲ್ಲಿ ಕೆಲವು ಪ್ರಶ್ನೆಗಳಿವೆ. ಅವರಿಗೆ ಸ್ಥಿರತೆಯ ಕೊರತೆ ಇದೆ ಎಂದು ಕಾಣುತ್ತದೆ ಎಂದು ಹೇಳಿದ್ದಾರೆ.
‘ನಮ್ಮ ದೇಶದ ನಾಯಕತ್ವದ ಬಗ್ಗೆ ನಾನು ಏನು ಬೇಕಾದರೂ ಹೇಳಬಲ್ಲೆ. ಆದರೆ ಬೇರೆ ದೇಶದ ನಾಯಕತ್ವದ ಬಗ್ಗೆ ಮಾತನಾಡುವುದಿಲ್ಲ. ಪ್ರತಿಯೊಬ್ಬರೂ ಆ ಮಿತಿಯನ್ನು ಕಾಯ್ದುಕೊಳ್ಳಬೇಕು. ಒಬಾಮಾ ಆ ಮಿತಿಯನ್ನು ಮೀರಿದ್ದಾರೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದರು.
‘ಕಾಂಗ್ರೆಸ್ ನಾಯಕನು ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಯಂತೆ ಕಾಣಿಸುತ್ತಾರೆ. ಆದರೆ, ವಿಷಯವನ್ನು ಕರಗತ ಮಾಡಿಕೊಳ್ಳುವ ಉತ್ಸಾಹ ಅವರಲ್ಲಿಲ್ಲ,’ ಎಂದು ಒಬಾಮಾ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ‘ಎಲ್ಲರ ದೃಷ್ಟಿಕೋನವನ್ನು ಒಪ್ಪಲೇಬೇಕು ಎಂಬ ಅಗತ್ಯವೇನೂ ಇಲ್ಲ,’ ಎಂದು ಹೇಳಿದ್ದಾರೆ.
ನಾನು ಸೋನಿಯಾ ಗಾಂಧಿ ಮತ್ತು ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ, ಕಾಂಗ್ರೆಸ್ಸಿಗರಿಗೆ ಗಾಂಧಿ-ನೆಹರೂ ಕುಟುಂಬದ ಬಗ್ಗೆ ಪ್ರೀತಿಯ ಭಾವನೆ ಇದೆ ಎಂದು ಪವಾರ್ ಅಭಿಪ್ರಾಯ ಪಟ್ಟಿದ್ದಾರೆ.