ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪಕ್ಷ ಆರಂಭ: ಡಿ.31ರಂದು ಘೋಷಣೆ

ಚೆನ್ನೈ: ಇಷ್ಟು ದಿನಗಳ ಊಹಾಪೋಹ, ಕಾಯುವಿಕೆಗೆ ಕೊನೆಗೂ ಸೂಪರ್ ಸ್ಟಾರ್ ರಜನಿಕಾಂತ್ ತೆರೆ ಎಳೆದಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸಲಿದ್ದು ಡಿಸೆಂಬರ್ 31ರಂದು ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಇಂದು ಟ್ವೀಟ್ ಮೂಲಕ ಈ ವಿಷಯ ಪ್ರಕಟಿಸಿರುವ ರಜನಿಕಾಂತ್, ಈಗ ಬದಲಾವಣೆ, ರೂಪಾಂತರ ತಾರದಿದ್ದರೆ ಮತ್ತೆ ಯಾವಾಗಲೂ ಸಾಧ್ಯವಿಲ್ಲ ಎಂದಿದ್ದಾರೆ. ಜನವರಿಯಲ್ಲಿ ಪಕ್ಷ ಆರಂಭವಾಗುತ್ತದೆ, ಈ ಸಂಬಂಧ ಡಿಸೆಂಬರ್ 31ರಂದು ಘೋಷಣೆ ಮಾಡಲಾಗುವುದು. ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಧಾರ್ಮಿಕ ರಾಜಕೀಯ ತಮಿಳು ನಾಡಿನಲ್ಲಿ ಆರಂಭವಾಗಲಿದೆ.

ಮುಂದಿನ ವರ್ಷ ತಮಿಳು ನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಜನರ ಬೆಂಬಲದೊಂದಿಗೆ ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರ ರಹಿತ, ಜಾತ್ಯತೀತ ರಾಜಕೀಯ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ರಜನಿಕಾಂತ್ ಹೇಳಿದ್ದರು. ತಮ್ಮ ರಾಜಕೀಯ ಜೀವನ ಆರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸ್ವಲ್ಪ ಸಮಯ ಬೇಕು ಎಂದು ನಟ ರಜನಿಕಾಂತ್ ಕಳೆದ ಸೋಮವಾರ ಚೆನ್ನೈಯ ತಮ್ಮ ನಿವಾಸದಲ್ಲಿ ನಡೆದಿದ್ದ ರಜಿನಿ ಮಕ್ಕಲ್ ಮಂದ್ರಮ್(ಆರ್ ಎಂಎಂ) ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ್ದರು. ಕಳೆದ 2017ರಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾಗಿ ಘೋಷಣೆ ಮಾಡಿದ್ದರು.

ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ ಮತ್ತು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ನಿಧನ ಬಳಿಕ ತಮಿಳು ನಾಡು ರಾಜಕೀಯದಲ್ಲಿ ಒಂದು ರೀತಿಯಲ್ಲಿ ಖಾಲಿ ವಾತಾವರಣ ಕಂಡಿದೆ ಎನ್ನಬಹುದು. ಆದರೆ ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ರಜನಿಕಾಂತ್ ಸ್ಪರ್ಧಿಸಿರಲಿಲ್ಲ. ತಮಿಳು ನಾಡಿನ ಮತ್ತೊಬ್ಬ ಖ್ಯಾತ ನಟ ಕಮಲ್ ಹಾಸನ್ ಮಕ್ಕಳ್ ನಿಧಿ ಮೈಯ್ಯಮ್ ಪಕ್ಷವನ್ನು ಆರಂಭಿಸಿದ್ದರೆ ರಜನಿಕಾಂತ್ ಇನ್ನೂ ಘೋಷಿಸಿರಲಿಲ್ಲ. ಬದಲಿಗೆ ತಮಿಳು ನಾಡು ಜನತೆ ಪರವಾಗಿ ಕೆಲಸ ಮಾಡುತ್ತೇನೆ ಎಂದಷ್ಟೇ ಹೇಳಿಕೊಂಡು ಬಂದಿದ್ದರು. ಕಳೆದ ವರ್ಷ ವೆಬ್ ಸೈಟ್ ನ್ನು ಆರಂಭಿಸಿ ಪಕ್ಷದ ಚಿಹ್ನೆಯನ್ನು ಬಿಡುಗಡೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!