ಕಳಂಕಿತ ಅಧಿಕಾರಿಗಳು ಪಂಚಾಯತ್ ಸದಸ್ಯರಾಗಲು ಸಾಧ್ಯವಿಲ್ಲ- ಮಸೂದೆ ಮಂಡನೆ
ಬೆಂಗಳೂರು: ವಿಧಾನಸಭೆಯಲ್ಲಿ ಮಂಡಿಸಲಾದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಅಥವಾ ಸಹಕಾರ ಸಂಘಗಳ ಅಡಿಯಲ್ಲಿ ಕೆಲಸ ಮಾಡುವಾಗ ಅಕ್ರಮಗಳು ಅಥವಾ ಇತರ ಕಾರಣಗಳಿಗಾಗಿ ಸೇವೆಯಿಂದ ವಜಾಗೊಂಡರೆ ಅಥವಾ ಅಮಾನತು ಗೊಂಡರೆ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಶಿಫಾರಸು ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದರು.
ತಿದ್ದುಪಡಿ ಮಸೂದೆಯು, ಒಬ್ಬ ವ್ಯಕ್ತಿಯನ್ನು ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳು ಅಥವಾ ಸಹಕಾರ ಸಂಘಗಳಿಂದ ಕಡ್ಡಾಯ ನಿವೃತ್ತಿಗೆ ಅಥವಾ ಸೇವೆಯಿಂದ ವಜಾಗೊಳಿಸಿದರೆ ಯಾವುದೇ ಪಂಚಾಯತ್‌ನ ಸದಸ್ಯನಾಗಿರಲು ಅನರ್ಹಗೊಳಿಸುತ್ತದೆ. ಯಾವುದೇ ಸಹಕಾರಿ ಸಂಘಗಳ ಅಧ್ಯಕ್ಷ ಮತ್ತು ಸದಸ್ಯ ಸ್ಥಾನದಿಂದ ತೆಗೆದುಹಾಕಲ್ಪಟ್ಟವರನ್ನು ಅನರ್ಹಗೊಳಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ತಿದ್ದುಪಡಿ ಮಸೂದೆಯಲ್ಲಿ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಜನಸಂಖ್ಯೆಯನ್ನು ಮಿತಿಗೊಳಿಸಲು ಪ್ರಸ್ತಾಪಿಸ ಲಾಗಿದೆ. ಎರಡು ಲಕ್ಷಕ್ಕಿಂತ ಹೆಚ್ಚು ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲ್ಲೂಕು ಪಂಚಾಯಿತಿಗಳು 12 ಸಾವಿರಕ್ಕಿಂತ ಹೆಚ್ಚಿಲ್ಲದ ಜನಸಂಖ್ಯೆಗೆ ಒಬ್ಬರು ಚುನಾಯಿತ ಸದಸ್ಯರನ್ನು ಹೊಂದಿರುತ್ತಾರೆ. ಒಂದರಿಂದ ಎರಡು ಲಕ್ಷ ಜನಸಂಖ್ಯೆಗೆ, ಪ್ರತಿ 10 ಸಾವಿರ ಜನಸಂಖ್ಯೆಗೆ ಒಬ್ಬರು ಚುನಾಯಿತ ಸದಸ್ಯರಿರುತ್ತಾರೆ.
50 ಸಾವಿರಕ್ಕಿಂತ ಹೆಚ್ಚಿಲ್ಲದ ಜನಸಂಖ್ಯೆಯು ಒಂಬತ್ತು ಚುನಾಯಿತ ಸದಸ್ಯರನ್ನು ಹೊಂದಿರುತ್ತದೆ. 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ತಾಲೂಕುಗಳು ಕನಿಷ್ಠ ಏಳು ಚುನಾಯಿತ ಸದಸ್ಯರನ್ನು ಹೊಂದಿರುತ್ತದೆ ಎಂದು ಮಸೂದೆಯು ಪ್ರಸ್ತಾಪಿಸುತ್ತದೆ. ಚಿಕ್ಕಮಗಳೂರು (ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲೂಕುಗಳನ್ನು ಹೊರತುಪಡಿಸಿ), ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳು 18 ಸಾವಿರ ಮತ್ತು 25 ಸಾವಿರ ನಡುವಿನ ಜನಸಂಖ್ಯೆಗೆ ತಲಾ ಒಬ್ಬರು ಚುನಾಯಿತ ಸದಸ್ಯರನ್ನು ಹೊಂದಿರುತ್ತಾರೆ.
ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸಂಬಂಧಿತ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವುದು ಮತ್ತು ಸಮಿತಿಯ ಉಪಾಧ್ಯಕ್ಷರಾಗಿ ಸಂಬಂಧಿಸಿದ ನಗರ ಪಾಲಿಕೆ ಅಥವಾ ಪುರಸಭೆಗಳ ಅಧ್ಯಕ್ಷರು ಅಥವಾ ಅಧ್ಯಕ್ಷರನ್ನು ನೇಮಿಸುವುದನ್ನು ಮಸೂದೆಯು ಪ್ರಸ್ತಾಪಿಸುತ್ತದೆ.