ಆರೋಗ್ಯ ಸಚಿವ ರಾಜೀನಾಮೆ ನೀಡಿ, ತನಿಖೆ ನಡೆದರೆ ಕೋಟಿಗಟ್ಟಲೆ ಅವ್ಯವಹಾರ ಬಯಲು- ಆಮ್ ಆದ್ಮಿ

ಬೆಂಗಳೂರು, ಮಾ.22: ಆರೋಗ್ಯ ಸಚಿವರು ರಾಜೀನಾಮೆ ನೀಡಿ, ನಿಷ್ಪಕ್ಷಪಾತ ತನಿಖೆ ನಡೆದರೆ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಕೋಟಿಗಟ್ಟಲೆ ಅವ್ಯವಹಾರ ಬಯಲಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಹಾಗೂ ಬಿಜೆಪಿಯ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಅವರು ಕೋವಿಡ್ ಮೊದಲ ಮತ್ತು 2ನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಉಪಕರಣ ಹಾಗೂ ಔಷಧಿ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ 40 ದೂರು ನೀಡಿದರೂ ಈ ಬಗ್ಗೆ ತನಿಖೆ ನಡೆದಿಲ್ಲ ಎಂದು ಆರೋಪಿಸಿದ್ದಾರೆ. 

ಆರೋಗ್ಯ ಇಲಾಖೆಯ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ, ಭಡ್ತಿ ಹಾಗೂ ವರ್ಗಾವಣೆ ಯಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೇ ನಡೆಯುತ್ತಿದೆ. ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳ ಖರೀದಿ, ನಿರ್ಮಾಣ ಕಾಮಗಾರಿ ಹಾಗೂ ಮೂಲಸೌಕರ್ಯ ಕಲ್ಪಿಸುವುದರಲ್ಲಿ ಭಾರೀ ಪ್ರಮಾಣದ ಅಕ್ರಮವಾಗುತ್ತಿದೆ. ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಪಡೆಯಲು ರೋಗಿಗಳು ಲಂಚ ನೀಡಬೇಕಾಗಿದೆ. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ ಆರೋಗ್ಯ ಇಲಾಖೆಯಲ್ಲಿನ ಕೋಟಿಗಟ್ಟಲೆ ಅವ್ಯವಹಾರ ಬಯಲಾಗುತ್ತದೆ. ರಾಜ್ಯಪಾಲರು ಶೀಘ್ರವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕ್ರಮಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಎಎಪಿಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ರವಿಶಂಕರ್ ಅವರು, ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳ ಹಣದ ದಾಹಕ್ಕೆ ಸಾಮಾನ್ಯ ರೋಗಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಸರಕಾರಿ ಆಸ್ಪತ್ರೆಯಿಂದ ರೋಗಿಯ ಶವವನ್ನು ಹೊರತರ ಬೇಕಾದರೂ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಲಂಚ ನೀಡಬೇಕಾಗಿದೆ. ಆರೋಗ್ಯ ಇಲಾಖೆಯ ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರುವುದು ಸಾಮಾನ್ಯವಾಗಿದ್ದರೂ, ಯಾರ ವಿರುದ್ಧವೂ ತನಿಖೆ ನಡೆಯುತ್ತಿಲ್ಲ. ಭ್ರಷ್ಟ ಸಚಿವರಿಂದಾಗಿ ಇಲಾಖೆಯ ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!