ಆದಿವಾಸಿ ಜನಾಂಗದವರ ಅನಿರ್ದಿಷ್ಟಾವಧಿ ಧರಣಿ : ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಉಡುಪಿ: ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2.25 ಕೋಟಿ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕೊರಗರ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೊರಗ ಸಮುದಾಯದವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಕೊರಗ ಸಮುದಾಯದ ಸಂಘಟನೆಯವರು ತಯಾರಿಸಿದ ಜನ ಯೋಜನೆಯನ್ನು ಕೈಬಿಟ್ಟು, ಅಧಿಕಾರಿಗಳು ತಯಾರಿಸಿದ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ನಿಗಮ ಹೊರಟಿದೆ. ಇದರಿಂದ ಆದಿವಾಸಿ ಜನಾಂಗದವರಿಗೆ ಸರಿಯಾದ ಅನುದಾನ ಹಂಚಿಕೆ ಆಗಲ್ಲ. ಅಲ್ಲದೆ, ಅಧಿಕಾರಿಗಳು ತಯಾರಿಸಿದ ಯೋಜನೆಯಲ್ಲಿ ಮೀನುಗಾರಿಕೆ ಸೇರಿದಂತೆ ಕೊರಗ ಸಮುದಾಯದವರು ಮಾಡದ ವೃತ್ತಿಗಳಿಗೆ ಅನುದಾನ ಮೀಸಲಿಡಲಾಗಿದೆ. ಹೀಗೆ ಅಧಿಕಾರಿಗಳು ತಯಾರಿಸಿದ ಯೋಜನೆಯಲ್ಲಿ ಹಲವಾರು ಲೋಪದೋಷಗಳಿವೆ.
ಹಾಗಾಗಿ ಸಂಘಟನೆಯ ಸದಸ್ಯರು ಸಲ್ಲಿಸಿದ ಯೋಜನೆಯನ್ನೇ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅರಣ್ಯ ಮೂಲ ಬುಡಗಟ್ಟು ಸಮುದಾಯಗಳ ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಶೀಲಾ ನಾಡ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಕೇಂದ್ರ ಸರ್ಕಾರ 2.25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದರಂತೆ ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿ ಸಮುದಾಯದ
ಜನಸಂಖ್ಯೆಗೆ ಅನುಗುಣವಾಗಿ ನಾವು ಕ್ರಿಯಾ ಯೋಜನೆ ತಯಾರಿಸಿ ಕೊಟ್ಟಿದ್ದೇವೆ.
ಆದರೆ ನಿಗಮವು ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಅನುದಾನ ಅನುಷ್ಠಾನಗೊಳಿಸುತ್ತಿಲ್ಲ. ಬದಲಾಗಿ ಅಧಿಕಾರಿಗಳೇ ಬೇರೊಂದು ಕ್ರಿಯಾ ಯೋಜನೆ ತಯಾರಿಸಿ ಅದರಲ್ಲಿ ಕೊರಗ ಸಮುದಾಯಕ್ಕೆ ಉಪಯೋಗವಾಗದ ಯೋಜನೆಗಳನ್ನು ಸೇರಿಸಿದ್ದಾರೆ ಎಂದು ದೂರಿದರು. ಅಧಿಕಾರಿಗಳು ತಯಾರಿಸಿದ ಯೋಜನೆಯಲ್ಲಿ ಕೊರಗ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಲ್ಲ. ಹಾಗಾಗಿ ಅಧಿಕಾರಿಗಳು ತಯಾರಿಸಿರುವ ಯೋಜನೆಯನ್ನು ಕೈಬಿಟ್ಟು, ಕೊರಗ ಸಮುದಾಯಗಳ ಸಂಘಟನೆಯವರು ಸಿದ್ಧಪಡಿಸಿ ಕೊಟ್ಟಿರುವ ಕ್ರಿಯಾಯೋಜನೆಯನ್ನು ಜಾರಿಗೊಳಿಸಬೇಕೆಂದು ಜಿಲ್ಲಾಡಳಿತ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಒತ್ತಾಯಿಸಿದ್ದೇವೆ.
ಆದರೆ ನಮ್ಮ ಬೇಡಿಕೆಯನ್ನು ಜಿಲ್ಲಾಡಳಿತ ಮೇಲಾಧಿಕಾರಿಗಳಿಗೆ ತಲುಪಿಸಿಲ್ಲ. ನಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿಲ್ಲ. ಹಾಗಾಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದರು. ಕೊರಗರ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಪುತ್ರನ್ ಹೆಬ್ರಿ, ಕೇರಳ ಹಾಗೂ ಕರ್ನಾಟಕ ಕೊರಗರ ಅಭಿವೃದ್ಧಿ ಒಕ್ಕೂಟಗಳ ಅಧ್ಯಕ್ಷೆ ಅಮ್ಮಣ್ಣಿ ಕೊರಗ ಚೋರಾಡಿ, ಬೊಗ್ರ ಕೊಕ್ಕರ್ಣೆ, ಕುಮಾರ ಕೆಂಜೂರು, ದಿವಾಕರ್ ಕಳತ್ತೂರುಸಂಜೀವ ಬಾರ್ಕೂರು, ಗಿರಿಜಾ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೊರಗ ಸಮುದಾಯದವರ ಅಭಿವೃದ್ಧಿಗಾಗಿ ಮೀಸಲಿರಿಸಿದ ರೂ. 2.25 ಕೋಟಿ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಖರ್ಚು ಮಾಡದೇ ಇರುವುದನ್ನು ಖಂಡಿಸಿ ಸಮುದಾಯದವರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದು ಸಾಯಂಕಾಲ 6 ಗಂಟೆ ಆದರೂ ಜಿಲ್ಲಾಡಳಿತ ಸ್ಪಂದಿಸದೇ ಇರುವುದನ್ನು ಮನಗಂಡು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ಈ ವಿಷಯವನ್ನು ತಿಳಿಸಿದ ಮೇರೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಇವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಮನವಿಗೆ ಜಿಲ್ಲಾಡಳಿತ ಸ್ಪಂದಿಸುವ ಬಗ್ಗೆ ತಿಳಿಸುವುದಾಗಿ ತಿಳಿಸಿ ಪ್ರತಿಭಟನೆಯನ್ನು ಕೈಬಿಡಬೇಕೆಂದು ತಿಳಿಸಿದರು.
ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಂದ ಬೇಡಿಕೆ ಈಡೇರಿಸುವ ಬಗ್ಗೆ ಮಂಗಳವಾರ ಸಭೆ ಕರೆಯುವ ಆಶ್ವಾಸನೆ ಸಿಕ್ಕಿದ ಹಿನ್ನೆಲೆಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದ ಕೊರಗ ಸಮುದಾಯದವರು ಧರಣಿಯನ್ನು ಅಂತ್ಯಗೊಳಿಸಿದ್ದಾರೆ.