ಮಾ.6 ರೊಳಗೆ ಚುನಾವಣಾ ಬಾಂಡ್‌ಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿ: ಸುಪ್ರೀಂ ಖಡಕ್ ಸೂಚನೆ

ನವದೆಹಲಿ: ಸುಪ್ರೀಂ ಕೋರ್ಟ್ ತಕ್ಷಣದಿಂದ ಜಾರಿಗೆ ಬರುವಂತೆ ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿದ್ದು, ಚುನಾವಣಾ ಬಾಂಡ್‌ಗಳ ಯೋಜನೆ ಅಸಂವಿಧಾನಿಕ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠ ಗುರುವಾರ ಸರ್ವಾನುಮತದ ತೀರ್ಪು ನೀಡಿದೆ.

ಕೇಂದ್ರ ಸರ್ಕಾರದ ಚುನಾವಣಾ ಬಾಂಡ್‌ಗಳ ಯೋಜನೆಯ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿದ್ದು, ಮಾರ್ಚ್ 6, 2024 ರೊಳಗೆ ಎಸ್‌ಬಿಐ, ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಸಪ್ರೀಂ ಕೋರ್ಟ್ ಸೂಚಿಸಿದೆ.

ಎಸ್‌ಬಿಐ ನಗದೀಕರಣದ ದಿನಾಂಕ, ಮುಖಬೆಲೆಯ ದಿನಾಂಕ ಸೇರಿದಂತೆ ರಾಜಕೀಯ ಪಕ್ಷಗಳು ಎನ್ಚೇಸ್ ಮಾಡಿದ ಪ್ರತಿಯೊಂದು ಚುನಾವಣಾ ಬಾಂಡ್‌ನ ವಿವರಗಳನ್ನು ಬಹಿರಂಗಪಡಿಸಬೇಕು.

ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರ್ಚ್ 13 ರೊಳಗೆ SBI ಹಂಚಿಕೊಂಡ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

2019 ರಿಂದ ಎಷ್ಟು ದೇಣಿಗೆ ಬಂದಿದೆ, ಎಷ್ಟು ಹಣವನ್ನು ರಾಜಕೀಯ ಪಕ್ಷಗಳು ಬಳಸಿಕೊಂಡಿದೆ ಎಂದು ಮಾಹಿತಿ ನೀಡಲು ಇದೇ ವೇಳೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಚುನಾವಣಾ ಬಾಂಡ್ ಯೋಜನೆ ಒಂದೇ ದಾರಿಯಲ್ಲ ಅದಕ್ಕೆ ಪರ್ಯಾಯ ಮಾರ್ಗಗಳಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!