ಜಮೀರ್ ಅಪ್ಪಣೆ ಪಡೆದು ಸರ್ಕಾರ ಕಾರ್ಯ ನಿರ್ವಹಿಸಬೇಕೇ ?: ಸಿಎಂ ಬಿಎಸ್ ವೈ ಕಿಡಿ
ಬೆಂಗಳೂರು: ಪಾದರಾಯನಪುರದಲ್ಲಿ ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.
ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಇದೊಂದು ಸೂಕ್ಷ್ಮ ವಿಚಾರವಾಗಿದ್ದು ಎಲ್ಲರೂ ಸಂಯಮದಿಂದ ವರ್ತಿಸಬೇಕು. ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡನೀಯ. ಆದರೆ ಇಲ್ಲಿ ಯಾವುದೇ ರೀತಿಯ ಕೋಮು ಅಥವಾ ಸಮುದಾಯದ ಪ್ರಶ್ನೆಯನ್ನು ಯಾರೂ ತರಬಾರದು ಎಂದು ಹೇಳಿದರು. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಗೃಹಸಚಿವರೊಂದಿಗೆ ಮಾತನಾಡಿದ್ದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ. ಈ ಸಂಬಂಧ ಪೊಲೀಸರು ಕೂಡ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೊಳಪಡಿಸಲಿದ್ದಾರೆ.
ಗೂಂಡಾಗಿರಿ ಸಹಿಸುವುದಿಲ್ಲ
ಪಾದರಾಯನಪುರದಲ್ಲಿ ಗೂಂಡಾಗಿರಿ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಇದುವರೆಗೆ 54 ಜನರನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಕಿಡಿಗೇಡಿಗಳನ್ನು ಬಂಧಿಸಲಾಗುವುದು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗೂಂಡಾಗಿರಿ ಪ್ರವೃತ್ತಿಯನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ. ಸರ್ಕಾರ ಮಾಡುವ ಕೆಲಸಕ್ಕೆ ಜಮೀರ್ ಅಹ್ಮದ್ ಅನುಮತಿ ಯಾಕೆ ಕೇಳಬೇಕು. ಅವರು ಯಾರು. ಅವರ ಹೇಳಿಕೆ ನೋಡಿದರೆ ಇಂತಹ ಗಲಭೆಗೆ ಅವರೇ ಪ್ರಚೋದನೆ ನೀಡುತ್ತಿದ್ದಾರೆಂದು ಭಾವಿಸಬೇಕೆ? ರಾಜ್ಯದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಈ ರೀತಿಯ ಗೂಂಡಾ ಪ್ರವೃತ್ತಿ ಸಹಿಸುವ ಪ್ರಶ್ನೆ ಇಲ್ಲ. ಇದರಲ್ಲಿ ಯಾವ ಧರ್ಮ, ಜಾತಿಯ ಪ್ರಶ್ನೆಯಿಲ್ಲ. ಗೂಂಡಾಗಿರಿ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.
ಶಾಸಕ ಜಮೀರ್ ವಿರುದ್ಧ ಸಿಎಂ ಕಿಡಿ
ಇದೇ ವೇಳೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿಕಾರಿದ ಸಿಎಂ ಯಡಿಯೂರಪ್ಪ ಅವರು, ಕೊರೋನಾ ವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸರ್ಕಾರದ ಕೆಲಸಕ್ಕೆ ಅನುಮತಿ ನೀಡಲು ಜಮೀರ್ ಅಹ್ಮದ್ ಯಾರು..? ಇವರ ಅಪ್ಪಣೆ ಪಡೆದು ಸರ್ಕಾರ ಕಾರ್ಯ ನಿರ್ವಹಿಸಬೇಕೇ.. ರಾತ್ರಿ ಹೋಗಿ.. ಬೆಳಗ್ಗೆ ಹೋಗಿ ಎನ್ನಲು ಜಮೀರ್ ಯಾರು..? ಒಂದು ರೀತಿಯಲ್ಲಿ ಜಮೀರ್ ಅವರು ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಭಾವಿಸಬೇಕೇನು? ಅದರ ಅರ್ಥವೇನು.. ತಪ್ಪು ಮಾಡಿದವರ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳಿ ಎಂದು ಹೇಳಬೇಕಾದಂತಹ ವ್ಯಕ್ತಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಉತ್ತಕ ಕೊಡಬೇಕಾದ್ದು ಸರ್ಕಾರವೇ ಹೊರತು ಜಮೀರ್ ಅಲ್ಲ.. ಜಮೀರ್ ಅವರ ಹೇಳಿಕೆ ಬೇಜವಾಬ್ದಾರಿ ತನದ ಪರಮಾವಧಿ ಎಂದು ಸಿಎಂ ಕಿಡಿಕಾರಿದರು.