ಅಯೋಧ್ಯೆಯಲ್ಲೇ ಮಸೀದಿ ನಿರ್ಮಾಣಕ್ಕೆ ಜಾಗ ಗುರುತು ಮಾಡಿದ ಯೋಗಿ ಸರ್ಕಾರ
ಲಖನೌ: ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸೂಕ್ತವಾಗುವಂತಹ ಸ್ಥಳಗಳನ್ನು ಉತ್ತರಪ್ರದೇಶ ಸರ್ಕಾರ ಗುರುತು ಮಾಡಿದೆ.
ಬಾಬರಿ ಮಸೀದಿ, ರಾಮಜನ್ಮ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಸುನ್ನಿ ಮಂಡಳಿಗೆ 5 ಎಕರೆ ಜಮೀನು ಕೊಡುವಂತೆ ಆದೇಶ ಮಾಡಲಾಗಿತ್ತು. ಬಾಬರಿ ಮಸೀದಿ ಇದ್ದ ಸ್ಥಳ ಶ್ರೀರಾಮನ ಜನ್ಮಸ್ಥಳವಾಗಿದೆ ಎಂಬುದು ಹಿಂದುಗಳ ಅದಮ್ಯ, ಅಚಲ ನಂಬಿಕೆಯಾಗಿದ್ದು ಬಾಬರಿ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡುಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿತ್ತು.
ಈ ತೀರ್ಪಿನ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಮಿರ್ಜಾಪುರ್, ಶಂಶುದ್ದೀನ್ ಪುರ್ ಮತ್ತು ಚಾಂದ್ ಪುರ್ ನಲ್ಲಿ ಐದು ಸೂಕ್ತ ನಿವೇಶನಗಳನ್ನು ಗುರುತಿಸಿದ್ದು, ಈ ಪ್ರದೇಶ ಪವಿತ್ರ ಸ್ಥಳ ಎಂದು ಗುರುತಿಸಿರುವ ಪಂಚ್ ಕೋಶಿ ಪರಿಕ್ರಮದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ ತಿಳಿದುಬಂದಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಸುನ್ನಿ ವಕ್ಫ್ ಬೋರ್ಡ್ ಟ್ರಸ್ಟಿಗಳು ಈ ಸ್ಥಳವನ್ನು ಪರಿಶೀಲಿಸಿ ಮಸೀದಿ ನಿರ್ಮಾಣಕ್ಕೆ ಯಾವ ಸ್ಥಳ ಸೂಕ್ತ ಎಂಬುದನ್ನು ತಿಳಿಸಲಿ ಎಂದು ಉತ್ತರಪ್ರದೇಶ ಸರ್ಕಾರ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಅಯೋಧ್ಯೆ-ಬಾಬರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ಐವರು ನ್ಯಾಯಾಧೀಶರ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ 18 ಅರ್ಜಿಗಳನ್ನು ಕಳೆದ ಡಿಸೆಂಬರ್ 12ರಂದು ನ್ಯಾಯಾಲಯ ವಜಾ ಮಾಡಿತ್ತು.