ಡಿವೈನ್ ಪಾರ್ಕ್: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗೆ ಡಾ.ವೀರೇಂದ್ರ ಹೆಗ್ಗಡೆ ಚಾಲನೆ
ಉಡುಪಿ – ಜಿಲ್ಲೆಯ ಮೂಡುಗಿಳಿಯಾರಿನ ಯೋಗಬನದ ಪ್ರಕೃತಿ ಮಡಿಲಲ್ಲಿ ತಲೆಎತ್ತಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ (ಸರ್ವಕ್ಷೇಮ) ಆಸ್ಪತ್ರೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.
ಡಿವೈನ್ ಪಾರ್ಕ್ ಟ್ರಸ್ಟ್ ನ ಅಂಗಸಂಸ್ಥೆಯಾದ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಉದ್ಘಾಟಿಸಿ ಡಾ.ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. “ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಇಂದಿನ ಅಗತ್ಯವಾಗಿದೆ. ನಿಸರ್ಗದ ಮಡಿಲಲ್ಲಿ ಆಸ್ಪತ್ರೆ ಇರುವುದರಿಂದ ಇಲ್ಲಿ ದೊರೆಯುವ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಾಸ್ತುಶಿಲ್ಪ ಹಾಗೂ ಪ್ರಾಚೀನ ಶೈಲಿಯಿಂದಾಗಿ ಆಸ್ಪತ್ರೆ ಪ್ರಕೃತಿಗೆ ಹತ್ತಿರವಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಬಳಕೆಮಾಡಿಕೊಂಡಿರುವುದು ಇದರ ಹೆಮ್ಮೆ’ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ಇಲ್ಲಿಯ ಪರಿಸರದಲ್ಲಿ ಚಿಕಿತ್ಸೆ ಸಿಗುವುದು ನಮ್ಮ ಪುಣ್ಯ. ಆಧುನಿಕತೆಯಿಂದಾಗಿ ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡುವವರು ಇಲ್ಲಿ ಬಂದು ನೆಮ್ಮದಿ ಹುಡುಕಬಹುದು’ ಎಂದರು.
ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಎಚ್.ಆರ್.ನಾಗೇಂದ್ರ ಉದ್ಘಾಟಿಸಿದರು.
ಆ ಬಳಿಕ ಅವರು ಮಾತನಾಡಿ, “ಯೋಗ, ಧ್ಯಾನ ಹಾಗೂ ಪ್ರಕೃತಿ ಚಿಕಿತ್ಸೆ ಸಿಗುವಂತಹ ಜಾಗದಲ್ಲಿ ವಿವೇಕಾನಂದರ ಪ್ರತಿಮೆ ಕಾಣಲು ಸಿಗಲಿದೆ. ಅವರು ನಡೆದ ಹಾದಿ ಇಲ್ಲಿ ನಮಗೆ ನೆನಪಾದರೆ ಅದಕ್ಕಿಂತ ಅರ್ಥಪೂರ್ಣವಾದ ಕೆಲಸ ಬೇರೆ ಇಲ್ಲ’ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈನ್‍ಪಾರ್ಕ್ ಟ್ರಸ್ಟ್ ನ ಆಡಳಿತ ನಿರ್ದೇಶಕರಾದ ಡಾಕ್ಟರ್‍ಜೀ ಮಾತನಾಡಿ, “ಶಾಂತಿ, ನೆಮ್ಮದಿ ಅರಸುವವರಿಗೆ ಇದು ಪ್ರಶಸ್ತ ಜಾಗ. ಪ್ರಕೃತಿ ಚಿಕಿತ್ಸೆ ಇವತ್ತು ವಿಶ್ವದಾದ್ಯಂತ ಪಸರಿಸಿದೆ. ಇದಕ್ಕೆ ಕಾರಣ ನಮ್ಮ ಪ್ರಕೃತಿಯಲ್ಲಿಯೇ ಇರುವ ಔಷಧಿ ಗುಣ. ನಾವು ಇದನ್ನು ಬೆಳೆಸಿ ಉಳಿಸಬೇಕಿದೆ’ ಎಂದರು.
“ರುದ್ರಿ” ಸಿನಿಮಾದ ನಾಯಕಿ ಹಾಗೂ ನಟಿ ಪಾವನಾ ಗೌಡ ಮಾತನಾಡಿ, “ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಘಟನೆಗಳು ನಿತ್ಯ ನಡೆಯುತ್ತವೆ. ನಮ್ಮ ಸಿನಿಮಾ “ರುದ್ರಿ’ ಕೂಡ ಇಂತದ್ದೇ ಒಂದು ಕಥೆಯನ್ನು ಒಳಗೊಂಡಿದೆ. ಪ್ರಕೃತಿ ನಮ್ಮ ಎಲ್ಲಾ ಪ್ರಶ್ನೆಗಳು ಉತ್ತರ ನೀಡಬಲ್ಲದು. ಹಾಗೇ ಇಲ್ಲಿ ಸಿಗುವ ಚಿಕಿತ್ಸೆ ಕೂಡ ಇಂದು ತೀರಾ ಅನಿವಾರ್ಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಕರ್ ಉಡುಪ ಹಾಗೂ ವಿವೇಕ್ ಉಡುಪ ಉಪಸ್ಥಿತರಿದ್ದರು
ಆಸ್ಪತ್ರೆ ವಿಶೇಷತೆ: ಪ್ರಾಚೀನ ದೇಗುಲದ ವಾಸ್ತು ವಿನ್ಯಾಸವನ್ನು ಹೊಂದಿದ ಜಗತ್ತಿನ ಪ್ರಥಮ ಯೋಗ ಆಸ್ಪತ್ರೆ. ಆಯುಷ್ ವಿಭಾಗದಲ್ಲಿ ದೇಶದ ಪ್ರಥಮ ಪರಿಸರ ಸ್ನೇಹಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ. ಕರಾವಳಿಯ ಪ್ರಾಚೀನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪ್ರಕೃತಿ, ಯೋಗ, ಆಹಾರ, ಅಧ್ಯಾತ್ಮಿಕ, ಸಂಗೀತ, ಹಸಿರು, ಹಾಸ್ಯ, ಮೌನ ಚಿಕಿತ್ಸೆಯ ಸಂಗಮ. ಪರಿಸರ ಸ್ನೇಹಿ ಆಸ್ಪತ್ರೆ ಇದಾಗಿದೆ. ಸೋಲಾರ್ ವ್ಯವಸ್ಥೆ ಇದೆ. ಸೈಕಲ್ ಟ್ರ್ಯಾಕ್ ಕೂಡ ನಿರ್ಮಾಣಗೊಂಡಿದೆ.
ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರೋತ್ಥಾನದ ಬೇರೆ ಬೇರೆ ಯೋಜನೆಗಳಲ್ಲಿ ಅಧ್ಯಾತ್ಮ, ಆರೋಗ್ಯ, ಯೋಗದ ಮಹಿಮೆಯನ್ನು ತಿಳಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಜಗತ್ತಿನ ಅತೀ ಎತ್ತರದ ಪ್ರತಿಮೆ ಮೂಡುಗಿಳಿಯಾರಿನಲ್ಲಿ- ಇದು ಜಗತ್ತಿನಲ್ಲೇ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯಾಗಿದೆ. 35 ಅಡಿ ಎತ್ತರ ಇದೆ. ಪ್ರತಿಮೆಗೆ ವಿಶೇಷವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಹಸಿರು ಹುಲ್ಲು ಹಾಸಿನ ನಡುವೆ ಇರಿಸಲಾಗಿದೆ.