ತನ್ನ ಬೃಂದಾವನ ಜಾಗವನ್ನ ತಾನೇ ಸೂಚಿಸಿದ ಯತಿವರ್ಯ

ಉಡುಪಿ — ಹರ್ನಿಯಾ ಆಪರೇಷನ್ ನಡೆದಾಗಲೇ ಪೇಜಾವರ ಶ್ರೀಗಳು ತಮ್ಮ ಕೊನೆಯಾಸೆ ಬಿಚ್ಚಿಟ್ಟಿದ್ದರು. ಲಿಖಿತ ರೂಪದಲ್ಲಿ ಕೊನೆಯಾಸೆಯನ್ನು ಶ್ರೀಗಳು ಬರೆದುಕೊಟ್ಟಿದ್ದರು.

ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಎಂದು ಪೇಜಾವರ ಶ್ರೀಗಳು ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದರು. ಲಿಖಿತ ರೂಪದಲ್ಲಿ ಬರೆದು ಆಗಾಗ ಕಿರಿಯ ಶ್ರೀಗಳಿಗೆ ಅದನ್ನು ತೋರಿಸುತ್ತಿದ್ದರು. ಜಾಗವನ್ನು ಕೂಡ ಸೂಚಿಸಿ, ಇಲ್ಲೇ ನನ್ನ ಬೃಂದಾವನ ಆಗಬೇಕು ಎಂದು ಶ್ರೀಗಳು ಬರೆದು ಕೊಟ್ಟಿದ್ದರು. ಕಳೆದ ಬಾರಿ ಹರ್ನಿಯಾ ಅಪರೇಷನ್‍ಗೆ ಒಳಗಾಗಿದ್ದ ಶ್ರೀಗಳು ತಮ್ಮ ಕೊನೆಯಾಸೆಯ ಬಗ್ಗೆ ತಿಳಿಸಿದ್ದರು ಎಂದು ಮಾದ್ಯಮಕ್ಕೆ ರಘುಪತಿ ಭಟ್ ತಿಳಿಸಿದ್ದಾರೆ. 

ಶ್ರೀಗಳ ಕೊನೆ ಆಸೆಯಂತೆ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯಲಿದೆ. ಮದ್ವ ಸರೋವರದಲ್ಲಿ ಶ್ರೀಗಳಿಗೆ ಸ್ನಾನ ಮಾಡಿಸಿ ಕೃಷ್ಣನ ದರ್ಶನ ಮಾಡಿಸಲಾಗುತ್ತದೆ. ಅಲ್ಲಿಂದ ನೇರವಾಗಿ ಅಜ್ಜರ ಕಾಡು ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ.

ಅಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಸಾರ್ವಜನಿಕರಿಗೆ ಪೇಜಾವರ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಶ್ರೀಗಳ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತದೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ಮತ್ತೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕೊನೆಗೆ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತಿಮ ಕ್ರಿಯಾ ವಿಧಿ ವಿಧಾನಗಳು ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!