ಕಟೀಲು ದೇವಸ್ಥಾನ ಆಡಳಿತದ ವಿರುದ್ಧ ಆರೋಪ : ಜಾಮೀನು.
ಉಡುಪಿ -( ಉಡುಪಿ ಟೈಮ್ಸ್ ವರದಿ) ಕಟೀಲು ದೇವಸ್ಥಾನದ ಅಸ್ರಣ್ಣರವರ ಆಡಳಿತ ವೈಫಲ್ಯದ ಬಗ್ಗೆ ಹಾಗು ದೇವಸ್ಥಾನ ವಿಶೇಷ ಸೇವೆ , ಯಕ್ಷಗಾನದ ಚಟುವಟಿಕೆಗಳ ಹಣ ದುರಪಯೋಗದ ಕುರಿತಂತೆ ಮಾಡಿರುವ ಆರೋಪಕ್ಕೆ ಆರೋಪಿತರಿಗೆ ಜಾಮೀನು ದೊರೆತಿದೆ
ಆರೋಪಿತರಾದ ವಸಂತ್ ಗಿಳಿಯಾರ್ , ಸಂಜೀವ್ ಮಡಿವಾಳ್ ಮತ್ತುಅನಂತ್ ರಾಜ್ ರಾವ್, ಕಟೀಲು ದೇವಸ್ಥಾನದ ಅಸ್ರಣ್ಣರವರ ಆಡಳಿತ ವೈಫಲ್ಯದ ಬಗ್ಗೆ ಸಾರ್ವಜನಿಕವಾಗಿ ಯುಟ್ಯೂಬ್ ಚಾನೆಲ್ ಮುಖಾಂತರ ಪ್ರಸಾರ ಮಾಡಿದ್ದರು. ಹಾಗೂ ಕಟೀಲು ಅಭಿವೃದ್ಧಿ ಗ್ರೂಪ್ ಎಂಬ ಗುಂಪು ಮಾಡಿ ಕಟೀಲು ದೇವಸ್ಥಾನದಲ್ಲಿ ಗುಂಪುಗಾರಿಕೆ, ಗೊಂದಲ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿ ಮೂಡಬಿದ್ರೆಯಲ್ಲಿ ಕಡಂದಲೆಯ ಕೆ ಪ್ರಸಾದ್ ಭಟ್ ರವರು ದೂರು ದಾಖಲಿಸಿದ್ದು, ಈ ಕುರಿತು ವಾದವನ್ನ ಆಲಿಸಿದ ಮೂಡಬಿದ್ರೆಯ ಜೆ ಎಮ್ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಯಶವಂತ್ ಕುಮಾರ್ ಮೂವರು ಆರೋಪಿತರಿಗೆ ಜಾಮೀನನ್ನು ಆದೇಶಿದ್ದಾರೆ.
ಈ ಮೊದಲು ಭಕ್ತಾದಿಗಳ ಧಾರ್ಮಿಕ ಭಾವನೆಗೆ ದಕ್ಕೆ ವಿಚಾರದಲ್ಲಿ ಬಜ್ಪೆ ಹಾಗೂ ಮುಲ್ಕಿ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ಈ ಪ್ರಕರಣಕ್ಕೆ ಜಾಮೀನು ದೊರೆತಿತ್ತು. ಅದಾದ ನಂತರ ಈ ಪ್ರಕರಣವನ್ನು ದಾಖಲಿಸಿದ್ದು ಇದೀಗ ಈ ಪ್ರಕರಣಕ್ಕೆ ಜಾಮೀನು ದೊರೆತಿದೆ.
ಆರೋಪಿತರ ಪರವಾಗಿ ಉಡುಪಿ ನ್ಯಾಯವಾದಿಗಳಾದ ಆರೂರು ಸುಕೇಶ್ ಶೆಟ್ಟಿ, ಗಿರೀಶ್ ಎಸ್. ಪಿ , ಸಂತೋಷ್ ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.