ಬಂಟ್ವಾಳ: ಮೈಕ್ರೋ ಫೈನಾನ್ಸ್ ದೌರ್ಜನ್ಯವನ್ನು ನಿಲ್ಲಿಸಿ ಸಿಐಟಿಯು ಒತ್ತಾಯ

ಬಂಟ್ವಾಳ (ಉಡುಪಿ ಟೈಮ್ಸ್ ವರದಿ): ಮಹಿಳೆಯರ ರಕ್ತ ಹೀರುವ ವಸೂಲಿಕೋರ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯವನ್ನು ನಿಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಒತ್ತಾಯಿಸಿದರು.

ಅವರು ಬಂಟ್ವಾಳ ಮಿನಿ ವಿಧಾನಸೌಧದ ಎದುರು ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ , ಸಿಐಟಿಯು ಬಂಟ್ವಾಳ ತಾಲೂಕು ಸಮಿತಿ , ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಡ ಮಹಿಳೆಯರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸ್ವ ಉದ್ಯೋಗದ ಹೆಸರಿನಲ್ಲಿ ಪ್ರಾರಂಭಿಸಿದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದು ಮಹಿಳೆಯರನ್ನು ಅಧಿಕ ಪ್ರಮಾಣದ ಬಡ್ಡಿ ವಿಧಿಸುವ ಮೂಲಕ ವಸೂಲಿಗಾಗಿ ದೌರ್ಜನ್ಯ ಹಿಂಸೆ ನಡೆಸುತ್ತಿದೆ. ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ದೌರ್ಜನ್ಯದಿಂದ ಬಡ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರಾಜ್ಯ, ಕೇಂದ್ರ ಸರ್ಕಾರಗಳು ಮೌನ ವಹಿಸುತ್ತಿದೆ. ಸರ್ಕಾರದ ಮೌನದ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟಕ್ಕೆ ಸಿಐಟಿಯು ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಜನವಾದಿ ಮಹಿಳಾ ಸಂಘಟನೆಯ ದ.ಕ ಜಿಲ್ಲಾಧ್ಯಕ್ಷೆ ಜಯಂತಿ ಬಿ ಶೆಟ್ಟಿ ಮಾತನಾಡಿ ಕರೋನಾ ಮಹಾಮಾರಿಯಿಂದಾಗಿ ಉದ್ಯೋಗವಿಲ್ಲದೆ ಬದುಕುತ್ತಿರುವ ಮಹಿಳೆಯರ ಮೇಲೆ ಮೈಕ್ರೋ ಫೈನಾನ್ಸ್ ದೌರ್ಜನ್ಯ ನಡೆಸುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿರುವುದು ಯಾವ ನ್ಯಾಯವೆಂದು ಪ್ರಶ್ನಿಸಿದ ಅವರು ನ್ಯಾಯಕ್ಕಾಗಿ ಮಹಿಳೆಯರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಸಿಐಟಿಯು ಬಂಟ್ವಾಳ ತಾಲೂಕು ಅಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ ಮೈಕ್ರೋ ಫೈನಾನ್ಸ್ ಏಜೆಂಟ್ ಗಳು ಮಹಿಳೆಯರಿಗೆ ನೀಡುತ್ತಿರುವ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರಬಹುದು ಎಂದರು. ಪೋಲಿಸ್ ಇಲಾಖೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಲು ಸೂಕ್ತ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು.

ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶಿವಕುಮಾರ್ ಎಸ್. ಎಂ ಮಾತನಾಡಿ ಇಡೀ ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ನ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಚರಿಸುತ್ತಾ ಬಡ ಮಹಿಳೆಯರನ್ನು ವಸೂಲಿ ಮಾಡುತ್ತಿದ್ದರೂ ನಮ್ಮನಾಳುವ ಸರ್ಕಾರಗಳು, ನಮ್ಮ ಜಿಲ್ಲೆಯ ಶಾಸಕ,ಸಂಸದರು ಮೌನವಹಿಸಿದ್ದಾರೆ. ಈ ರೀತಿಯ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಶಾಸಕ , ಸಂಸದರ ಮನೆ ಮುಂದೆ ಧರಣಿ ನಡೆಸಬೇಕಾದೀತೆಂದು ಎಚ್ಚರಿಕೆ ನೀಡಿದ ಅವರು ಋಣಮುಕ್ತ ಹೋರಾಟ ಸಮಿತಿ ಹೆಸರಿನಲ್ಲಿ ಕೆಲವರು ಮಹಿಳೆಯರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದು , ಹೋರಾಟವನ್ನು ದಮನಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ನಾಯಕಿ , ನ್ಯಾಯವಾದಿ ಸುಕನ್ಯಾ ಹರಿದಾಸ್ , ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿಯ ಬಂಟ್ವಾಳ ತಾಲೂಕು ಅಧ್ಯಕ್ಷೆ ಶೋಭಾ ಕೊಯಿಲ , ಬೆಳ್ತಂಗಡಿ ತಾಲೂಕು ಸ್ಥಾಪಕ ಕೊರಗಪ್ಪ ಪೂಜಾರಿ ಅಳದಂಗಡಿ, ಸಿಐಟಿಯು ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಶೇಖರ್ ಎಲ್ ಬೆಳ್ತಂಗಡಿ ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ಐ ಮುಖಂಡ , ನ್ಯಾಯವಾದಿ ತುಳಸಿದಾಸ್ ವಿಟ್ಲ , ಶ್ರೀನಿವಾಸ್ ಪೂಜಾರಿ, ಜಗದೀಶ್ ಬಂಟ್ವಾಳ, ದೇವರಾಜ್ ವಹಿಸಿದ್ದರು.

ಪ್ರತಿಭಟನೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಂಟ್ವಾಳ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!