ಉಚಿತ ಆರೋಗ್ಯ ಕಿಟ್ ವಿತರಿಸಿದ ಮಾಜಿ ಶಾಸಕ ಮೊಯಿದೀನ್ ಬಾವ
ಮಂಗಳೂರು(ಉಡುಪಿ ಟೈಮ್ಸ್ ವರದಿ ): ಕೊರೋನಾ ಸಂಕಷ್ಟ ವನ್ನು ನಿಭಾಯಿಸುವ ನಿಟ್ಟಿನಲ್ಲಿ ಮೊಹಿಯುದ್ದೀನ್ ಬಾವರಾರವರು ಇನ್ನೊಂದು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ತಮ್ಮ ಸ್ವಂತ ಖರ್ಚಿನಿಂದ ಪಲ್ಸ್ ಮೀಟರ್ ,ಜ್ವರ ತಪಾಸಣೆಯ ಮೀಟರ್ ಖರೀದಿಸಿ ಮಂಗಳೂರು ಉತ್ತರ ಕ್ಷೇತ್ರದ ಪ್ರತೀ ಮನೆ ಮನೆಗೆ ಕಾರ್ಯರ್ತರನ್ನು ಕಳಿಸಿ ಸಹಾಯಹಸ್ತ ಚಾಚುತ್ತಿದ್ದಾರೆ.
ಮನೆ ಮನೆಗೆ ಬರಲಿದ್ದಾರೆ ಕಾಂಗ್ರೆಸ್ ವಾರಿಯರ್ಸ್.
ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಬಡಜನರಿಗಾಗಿ ಸುಮಾರು 28 ಸಾವಿರ ಕಿಟ್ ಗಳನ್ನು ಕೊಟ್ಟಿದ್ದ ಮಾಜಿ ಶಾಸಕರಾದ ಮೊಯಿದೀನ್ ಬಾವಾರವರು ಈ ಬಾರಿ ತಮ್ಮ ಕ್ಷೇತ್ರದ ಜನರ ಆರೋಗ್ಯ ತಪಾಸಣೆ ಮಾಡಲು ಹೊರಟಿದ್ದಾರೆ .
ಮಂಗಳೂರು ಉತ್ತರ ಕಾಂಗ್ರೆಸ್ ವಾರಿಯರ್ಸ್ ಎಂಬ ಹೆಸರಿನಲ್ಲಿ,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನರ ದೇಹದ ಉಷ್ಣತೆ ಹಾಗು ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ ನೋಡಲಿದ್ದಾರೆ. ಕಾರ್ಯಕರ್ತರಿಗೂ ಗ್ಲೌಸ್, ಫೇಸ್ ಶೀಲ್ಡ್, ಸ್ಯಾನಿಟೈಸರ್, ಮಾಸ್ಕ್ ಮತ್ತಿತರ ಸುರಕ್ಷಾಕಿಟ್ ಗಳನ್ನೂ ನೀಡಲಾಗಿದೆ.
ಒಂದು ವೇಳೆ ಆರೋಗ್ಯದಲ್ಲಿ ಏರು ಪೇರು ಕಂಡು ಬಂದಲ್ಲಿ ಅವರಿಗೆ ಸೂಕ್ತ ತಪಾಸಣೆಗೆ ಒಳಪಡಿಸಲಿದ್ದಾರೆ. ಅಗತ್ಯ ಬಿದ್ದರೆ ಆಂಬುಲೆನ್ಸ್ ಸೇವೆ, ಆಸ್ಪತ್ರೆಯ ವ್ಯವಸ್ಥೆ ಮಾಡಿಕೊಡಲಿದ್ದಾರೆ.
ಮಂಗಳವಾರ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನ ಕಚೇರಿಯಲ್ಲಿ ಸ್ವತಃ ಮಾಜಿ ಶಾಸಕ ಮೊಯಿದೀನ್ ಬಾವಾ ಕಾರ್ಯಕ್ರಮ ಉದ್ಘಾಟಿಸಿ ಪ್ರತೀ ವಾರ್ಡ್ ಗಳಿಗೆ ತಪಾಸಣಾ ಕಿಟ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕೊರೊನಾ ವೇಗವಾಗಿ ಹರಡುತ್ತಿದೆ. ಮನೆ ಮನೆಯಲ್ಲೂ ಸಮಸ್ಯೆಗಳು ಎದುರಾಗುವ ಹಂತ ತಲುಪಿದೆ. ಇದನ್ನು ಮನಗಂಡು ಜನರ ಆರೋಗ್ಯ ಭಾಗ್ಯಕ್ಕಾಗಿ ಇದೊಂದು ಮಾದರಿ ಪ್ರಾಜೆಕ್ಟ್ ನ್ನು ಆರಂಭಿಸಿದ್ದೇನೆ. ರೋಗವನ್ನು ಆದಷ್ಟು ಬೇಗ ಕಂಡು ಹಿಡಿದಲ್ಲಿ ಗುಣಮುಖವಾಗುವ ಸಾಧ್ಯತೆ ಹೆಚ್ಚು. ಬಹಳ ಜನ ವಿಳಂಬ ಮಾಡಿರುವುದರಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಯೋಜನೆ ಆರಂಭಿಸಿದ್ದೇನೆ. ಜನ ಸಹಕರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳವಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ, ಮನಪಾ ಸದಸ್ಯ ಅನಿಲ್ ಕುಮಾರ್, ಬಶೀರ್ ಬೈಕಂಪಾಡಿ, ರಾಜೇಶ್ ಕುಳಾಯಿ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.