ಹೀಗೊಂದು ಭೂಮಿ ತಾಯಿಯ ಸೇವೆ
ಸಾಲಿಗ್ರಾಮ (ಉಡುಪಿ ಟೈಮ್ಸ್ ವರದಿ ):ಕೊರೋನದಂತಹ ಮಹಾಮಾರಿ ವ್ಯಾಪಿಸಿರುವ ಹಿನ್ನಲೆಯಲ್ಲಿ ಲಾಕ್‌ಡೌನ್‌ನಿಂದ ಮಾನಸಿಕವಾಗಿ ಕುಂದಿರುವ ಯುವ ಸಮಾಜದಲ್ಲಿ ಇಲ್ಲೊಂದು ಯುವಕರ ತಂಡ ಸದಾ ಹೊಸತನ ಹೊಸ ಹುರುಪನ್ನು ಮೂಡಿಸುತ್ತ ಬಂದಿದೆ. ಉಡುಪಿ ಜಿಲ್ಲೆಯ ಶ್ರೀ ಅಘೋರೇಶ್ವರ ಕಲಾರಂಗ (ರಿ) ಕಾರ್ತಟ್ಟು, ಚಿತ್ರಪಾಡಿ ಇಲ್ಲಿನ ಉತ್ಸಾಹಿ ಯುವಕರು, ಸಾಂಸ್ಕೃತಿಕ, ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿದ ಯುವ ತಂಡ ಲಾಕ್‌ಡೌನ್ ಸಂದರ್ಭದಲ್ಲಿ ನೊಂದ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿರುವುದಲ್ಲದೇ ಸುಮಾರು ಏಳು ವರ್ಷದಿಂದ ತಮ್ಮ ತಂಡವನ್ನು ಕೂಡಿಕೊಂಡು ಹಡಿಲು ಬಿದ್ದ ಗದ್ದೆಗಳನ್ನು ತಾವೇ ಉಳುಮೆ ಮಾಡಿ ಭತ್ತದ ಕೃಷಿಯನ್ನು ಮಾಡಿರುತ್ತಾರೆ.
ತಾವು ಉಳುಮೆ ಮಾಡಿ ಬೆಳೆದ ಅಕ್ಕಿಯನ್ನು ತಮ್ಮ ಸ್ವಾರ್ಥಕ್ಕೆ ಬಳಸದೆ ಜಿಲ್ಲೆಯ ಅನೇಕ ಅನಾಥಾಶ್ರಮಕ್ಕೆ ನೀಡುವುದು ಇವರ ಕಾಯಕ. ಕಳೆದ ಬಾರಿ ಬೆಳೆದ ಸುಮಾರು ೧೦ ಕ್ವಿಂಟಾಲ್ ಅಕ್ಕಿಯನ್ನು ಲಾಕ್‌ಡೌನ್ ಸಂದರ್ಭದಲ್ಲಿ ಅನಾಥಾಶ್ರಮಕ್ಕೆ ನೀಡಿರುವುದಲ್ಲದೇ ತಮ್ಮ ಕಲಾರಂಗದ ಪ್ರತಿ ಸದಸ್ಯನ ದೇಣಿಗೆಯಿಂದ ಸುಮಾರು ೧೦೦ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ದಿನಸಿ ಕಿಟ್‌ನ್ನು ನೀಡಿ ಆಸರೆಯಾಗಿದ್ದು ಇವರ ಸಾಧನೆ.
ಕಲಾ ಸೇವೆ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಇವರು, ಇವರ ಪರಿಸರದಲ್ಲಿ ಶವಸಂಸ್ಕಾರಕ್ಕೆ ರುದ್ರ ಭೂಮಿ ಇಲ್ಲದಿರುವುದನ್ನು ಮನಗೊಂಡು ಸರಕಾರದ ಅನುದಾನ ಮತ್ತು ಇತರ ದಾನಿಗಳ ಮುಖಾಂತರ ರುದ್ರ ಭೂಮಿ ನಿರ್ಮಾಣದ ಕನಸನ್ನು ಹೊತ್ತು ಅದರ ಕಾರ್ಯ ರೂಪಕ್ಕೆ ನಿಂತಿರುವುದು ಅಭಿನಂದನೀಯ.
No words for tell. Great work keep it up