ಉಡುಪಿ:109 ಮಂದಿಗೆ ಕೊರೋನಾ ಪಾಸಿಟಿವ್
ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಹರಡುತ್ತಿದ್ದು, ಗುರುವಾರ 109 ಜನರಲ್ಲಿ ಸೋಂಕು ಪಾಸಿಟಿವ್ ಧೃಢಗೊಂಡಿದೆ. 489 ಮಂದಿಯ ಗಂಟಲ ದ್ರವದಲ್ಲಿ ನೆಗೆಟಿವ್ ಬಂದಿದೆ.
ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆ ಇಬ್ಬರು ವೈದ್ಯರು, ಓರ್ವ ನರ್ಸ್ ಹಾಗೂ ಇತರ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ.
ಈ ಮೂಲಕ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ವೈರಸ್ ವ್ಯಾಪಕವಾಗಿ ಹರಡುವ ಭೀತಿ ಎದುರಾಗಿದೆ, ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಬಂದ್ ಮಾಡಿ, ಒಳಗಿನಿಂದ ಸ್ಯಾನಿಟೈಸರ್ ಮೂಲಕ ಶುಚಿಗೊಳಿಸಲಾಗುತ್ತಿದೆ. ತುರ್ತು ಚಿಕಿತ್ಸೆ, ಐಸೋಲೇಶನ್ ಹಾಗೂ ಫಿವರ್ ಕ್ಲಿನಿಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
ತುರ್ತು ಚಿಕಿತ್ಸೆ ಹೊರತುಪಡಿಸಿ ಸಾಮಾನ್ಯ ರೋಗಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸದ್ಯ ಮೂರು ದಿನಗಳ ಕಾಲ ಬಂದ್ ಮಾಡಿ, ಇಡೀ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ.
ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳಿಗೆ ಪಾಸಿಟಿವ್ ಬಂದಿರುವುದರಿಂದ ಮುಂದೆ ವೈದ್ಯರಿಂದ ಸಾರ್ವಜನಿಕರಿಗೆ ಖಾಯಿಲೆ ಹರಡಬಾರದೆಂಬ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಒಂದೇ ದಿನ ಬರೋಬ್ಬರಿ 104 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ.
ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 70 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 104 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತಿಳಿಸಿದ್ದಾರೆ.
ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2344 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 4169 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 51,422ಕ್ಕೇರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 1263 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 19,729 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 30,655 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.