ನನ್ನ ಮೇಲೆ ಆರೋಪ ನಿರಾಧಾರ: ಶಾಸಕ ಸುನಿಲ್ ಕುಮಾರ್ ಸ್ಪಷ್ಟನೆ
ಉಡುಪಿ- (ಉಡುಪಿ ಟೈಮ್ಸ್ ವರದಿ) ; ಎರಡು ದಿನದ ಹಿಂದೆ ವೆಬ್ ಚಾನೆಲ್ ಒಂದು ನಿರಾಧಾರವಾದ ಆರೋಪವನ್ನು ನನ್ನ ಮೇಲೆ ಮಾಡಿದ್ದು, ಯಾವುದೇ ದಾಖಲೆಯ ಸ್ಪಷ್ಟಿಕರಣ ನೀಡದೇ ಸುಳ್ಳು ಕಂತೆಯನ್ನು ಸೃಷ್ಟಿಸಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದೆರಡು ದಿನಗಳಿಂದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ತಾನು ನಿರ್ಮಿಸುತ್ತಿರುವ ತನ್ನ ಮನೆಗೆ, ನಾಟ್ ಫಾರ್ ಸೇಲ್ ಎಂಬ ಸರಕಾರಿ ಸಿಮೆಂಟನ್ನು ಬಳಸಿದ್ದಾರೆ ಎಂಬ ಆರೋಪಕ್ಕೆ ಸ್ಪಷ್ಟೀಕರಣ ನೀಡುತ್ತಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ತನ್ನ ಕಟ್ಟಡದ ನಿರ್ಮಾಣ ಮತ್ತು ವಿನ್ಯಾಸವನ್ನು ವಾಸ್ತು ಶಿಲ್ಪಿ ಪ್ರಮಲ್ ಕುಮಾರ್ ಅವರಿಗೆ ನೀಡಿದ್ದು, ಕಟ್ಟಡದ ಆರಂಭದಿಂದ ಪೂರ್ಣವಾಗುವ ವರೆಗೆ ಅವರಿಗೆ ಉಸ್ತುವಾರಿಯನ್ನು ನೀಡಲಾಗಿದೆ.
ಈ ಕಟ್ಟಡವನ್ನು ಸೃಷ್ಟಿ ವೆಂಚರ್ಸ್ ಇಂಡಿಯಾ ಏರಿಯಾ ನಂದಿಕೂರು, ಉಡುಪಿ ಇವರಿಗೆ ನೀಡಿ, ನಿರ್ಮಾಣದ ಒಪ್ಪಂದವನ್ನು ಡಿಸೆಂಬರ್ 2019 ರಲ್ಲಿ ಮಾಡಿಕೊಳ್ಳಲಾಗಿದೆ.
ಈ ಕಟ್ಟಡದ ತಂತ್ರಜ್ಞಾನ ಉಭಯ ಜಿಲ್ಲೆಗಳಲ್ಲಿ ಪ್ರಥಮವಾಗಿದ್ದು, ಜರ್ಮನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ತಂತ್ರಜ್ಞಾನದ ವಿಶೇಷತೆ ಏನೆಂದರೆ ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ನಿರ್ಮಾಣವಾಗುವಂತೆ, ಈ ರೀತಿಯ ಕಟ್ಟಡಕ್ಕೆ ಕೆಂಪಯ ಇಟ್ಟಿಗೆ ಅಥವಾ ಇತರ ಯಾವುದೇ ಇಟ್ಟಿಗೆಯನ್ನು ಬಳಸದೇ PANEL ಮಾದರಿಯ ಕಟ್ಟಡವಾಗಿದೆ ಎಂದರು.
ಟ್ರೇಡ್ ಹಾಗು ನಾನ್ ಟ್ರೇಡ್– ಸಿಮೆಂಟ್ ಬಗ್ಗೆ ಸಿಮೆಂಟ್ ಕಂಪನಿ ನಿಯಮಾವಳಿಗಳಲ್ಲಿ ಸ್ಪಷ್ಟತೆ ಇದ್ದು, ಟ್ರೇಡ್ ಸಿಮೆಂಟ್ ಎಂದರೆ ಡೀಲರ್ಸ್ – ಟ್ರೇಡರ್ಸ್ ಮುಖಾಂತರ ಗ್ರಾಹಕರಿಗೆ ಮಾರಾಟ ವಾಗುವ ಸಿಮೆಂಟ್. ನಾನ್ ಟ್ರೇಡ್ ಸಿಮೆಂಟ್ ಅಂದರೆ ಕಂಪನಿಯು ನೇರವಾಗಿ ಗ್ರಾಹಕನಿಗೆ ಮಾರಾಟ ಮಾಡುವ ಸಿಮಂಟ್. ಗ್ರಾಹಕ ತನ್ನ ಬಳಕೆಗೆ ಮಾತ್ರ ಇದನ್ನು ಬಳಕೆ ಮಾಡಬೇಕೆ ವಿನಃ ಮರು ಮಾರಾಟಕ್ಕೆ ಅವಕಾಶವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಂಪನಿಯೇ Not For Resale ಎಂದು ಮುದ್ರಿಸಿ ಗ್ರಾಹಕನಿಗೆ ನೀಡುತ್ತದೆ.
ಸಿಮೆಂಟ್ ಉತ್ಪಾದನೆಯಲ್ಲಿ ಸರಕಾರದ ಕೆಲಸಕ್ಕೆ ಬೇರೆ ಸಿಮೆಂಟ್ ಮತ್ತು ಖಾಸಗಿ ಕೆಲಸಕ್ಕೆ ಬೇರೆ ಸಿಮೆಂಟ್ ಇದೆ ಎಂಬುವುದು ನನ್ನ ಅನುಭವಕ್ಕೆ ಬಂದಿಲ್ಲ ಎಂದು ಸುನಿಲ್ ಕುಮಾರ್ ತಿಳಿಸಿದರು.
ಒಪ್ಪಂದದಂತೆ ಕಟ್ಟಡದ ಪೂರ್ತಿ ನಿರ್ಮಾಣದ ಗುತ್ತಿಗೆಯನ್ನು ಸೃಷ್ಟಿ ವೆಂಚರ್ ಅವರೇ ಮಾಡುತ್ತಿದ್ದು, ಖರೀದಿ, ಸಾಗಾಣಿಕೆ, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ಜವಾಬ್ದಾರಿ ಅವರದ್ದೇ ಆಗಿದ್ದೂ ಇದರಲ್ಲಿ ನನ್ನ ಜವಾಬ್ದಾರಿ ಇರುವುದಿಲ್ಲ. ವಿರೋಧಿಗಳು ಮತ್ತು ಕಾಂಗ್ರೆಸ್ ಈ ರೀತಿ ನಿರಾಧಾರ ಆರೋಪ ಮಾಡುತ್ತಿದ್ದು, ಇದು ಮೊದಲ ಸಲ ಅಲ್ಲ. ಕೆಲ ವರ್ಷದ ಹಿಂದೆ ನನ್ನ ಬಳಿ 50 ಲಾರಿಗಳಿಗೆ- ಬಳ್ಳಾರಿಯಲ್ಲಿ ಗಣಿ ಗಾರಿಕೆ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಡಿನೋಟಿಫಿಕೇಷನ್ ಮಾಡುತ್ತಿದ್ದಾರೆ. ನನ್ನ ಬಳಿ ಬಹುಮಡಿ ಕಟ್ಟಡಗಳು ಹಾಗೂ ಮುಂಬಯಿಯಲ್ಲಿ ಹೊಟೇಲ್‌ಗಳಿವೆ ಎಂದು ನಿರಾಧಾರ ಆರೋಪಗಳನ್ನು ಮಾಡಿದ್ದರು, ಮತ್ತು ಇನ್ನೂ ಮಾಡುತ್ತಿದ್ದಾರೆ, ಅಷ್ಟೇ ಅಲ್ಲದೆ ನನ್ನ ತಂದೆ- ತಾಯಿಯ ಜಾತಿ ಯ ಬಗ್ಗೆಯೂ ಆರೋಪ ಮಾಡಿದ್ದರು. ಇಲ್ಲಿಯವರೆಗೂ ಈ ಎಲ್ಲಾ ಆರೋಪಗಳಿಗೆ ಯಾವುದೇ ಸಾಬೀತು ಆಗಿಲ್ಲ. ಈ ಎಲ್ಲ ಆರೋಪಗಳು ನೀರಿನ ಮೇಲೆ ಗುಳ್ಳೆ ಯಂತೆ ಮಾಯವಾಗಿದೆ. ವೆಬ್ ಚಾನೆಲ್ ಮುಖೇನ ವಿರೋಧಿಗಳು ಈಗ ಮಾಡಿರುವ ಆರೋಪ ನಿರಾಧಾರ. ಆರೋಪ ಗಳ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆ ಅಷ್ಟೆ ಎಂದರು.
ಈ ರೀತಿ ನಿರ್ಧಾರವಾಗುವ ಯಾವುದೇ ಸ್ಪಷ್ಟತೆ ಮತ್ತು ದಾಖಲೆ ಇಲ್ಲದ ವಿಷಯವನ್ನು ಇಟ್ಟುಕೊಂಡು ಪತ್ರಕರ್ತರಂತೆ ಮುಖವಾಡ ಹಾಕಿರುವ ಕೆಲವರು ಇದನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಈ ರೀತಿಯಾದ ಯಾವುದೇ ಬ್ಲಾಕ್ ಮೇಲ್‌ಗಳಿಗೆ ನಾನಾಗಲಿ, ನನ್ನ ಕುಟುಂಬವಾಗಲಿ ಭಯ ಪಡುವುದಿಲ್ಲ.
ಈ ರೀತಿ ಸಾರ್ವಜನಿಕವಾಗಿ ಸುಳ್ಳು ಆರೋಪ ಮಾಡುತ್ತಿರುವವರ ಮೇಲೆ ಪ್ರತಿಯಾಗಿ ನಾನು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತೇನೆ. ಈ ಕುರಿತಂತೆ ವಿರೋಧಿಗಳು ಮತ್ತು ಕಾಂಗ್ರೆಸ್ ಯಾವುದೇ ತನಿಖೆಗೆ ಒತ್ತಾಯಿಸಿದರೂ, ನಾನು ಎದುರಿಸಲು ಸಿದ್ದನಿದ್ದೇನೆ. ಯಾವುದೇ ತನಿಖೆಯನ್ನು ನಾನು ಸ್ವಾಗತಿಸುತ್ತೇನೆ.
ಈ ಸ್ಪಷ್ಟೀಕರಣ ನನ್ನ ಪಕ್ಷದ ಕಾರ್ಯಕರ್ತರಿಗೆ, ಹಿತೈಷಿಗಳಿಗೆ, ನನ್ನ ಅಭಿಮಾನಿಗಳಿಗೆ ಹೊರತು, ವಿನಾಕಾರಣ ನಿರಾಧಾರ ಆರೋಪ ಮಾಡುತ್ತಿರುವ ಟೀಕಾಕಾರರಿಗೆ ಅಲ್ಲ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ತಿಳಿಸಿದರು.