ಇನ್ನಾದರೂ ಉಡುಪಿಯಲ್ಲಿ ನರ್ಮ್ ಬಸ್ ರಸ್ತೆಗಿಳಿಯುವುದೇ? ಸಾರ್ವಜನಿಕರ ವಲಯದಲ್ಲಿ ಎದ್ದಿದೆ ಹೀಗೊಂದು ಪ್ರಶ್ನೆ…

ಉಡುಪಿ (ಉಡುಪಿ ಟೈಮ್ಸ್ ವರದಿ); ಲಾಕ್ ಡೌನ್ ಇಲ್ಲ ಎಂದಾಗ ದಿನಗೂಲಿ ನೌಕರರು, ಮಧ್ಯಮ ವರ್ಗದವರು ಸಂತಸ ಪಟ್ಟರು. ಆದರೆ ಇದೀಗ ಬಸ್ ಸಂಚಾರ ಸ್ಥಗಿತಗೊಳಿಸಿರುವುದಕ್ಕೆ ಸಾರ್ವಜನಿಕರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಲಾಕ್ ಡೌನ್ ಆದ ನಂತರ ನರ್ಮ್ ಬಸ್ ಗಳು ಡಿಪೋದಲ್ಲಿ ನಿಷ್ಕ್ರಿಯವಾಗಿ ನಿಂತಿದೆ. ನರ್ಮ್ ಬಸ್ ಗಳ ಬದಲಿಗೆ ಲಿಂಕ್ ಬಸ್ಸುಗಳನ್ನೂ ಸಾರ್ವಜನಿಕರಿಗೆ ಒದಗಿಸಿದರು. ಇದರಿಂದ ಜನರಿಗೆ ಬಸ್ಸುಗಳ ಸಂಖ್ಯೆ ಕಡಿಮೆಯಾಗಿ, ಇರುವ ಬಸ್ಸಿನಲ್ಲಿ ಜನರ ಸಂಖ್ಯೆ ಹೆಚ್ಚಾಗಿ ಬಸ್ಸುಗಳಲ್ಲಿ ಸಾಮಾಜಿಕ ಅಂತರ ಇಲ್ಲದಂತಾಗಿದೆ. ಸಾರ್ವಜನಿಕರಿಗೆ ಸೇವೆಯನ್ನು ನೀಡಬೇಕಾದ ಸರಕಾರಿ ಬಸ್ ಗಳು ಇಂದು ರೋಡಿಗೆ ಇಳಿಯದೆ ಇರುವುದು ದುರದ್ರಷ್ಟಕರ.


ಗಾಯದ ಮೇಲೆ ಬರೆ -ದಿನಕೂಲಿ ಮಾಡುವ ನೌಕರರು ತಿಂಗಳುಗಟ್ಟಲೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದರು. ಆದರೆ ಇದೀಗ ಲಾಕ್ ಡೌನ್ ಸಡಿಲಿಕೆಯಾಗಿ ಪ್ರಯಾಣಿಸಲು ಸಾಕಷ್ಟು ಬಸ್ ಇಲ್ಲದೆ ಇರುವ ಬೆರಳೆಣಿಕೆಯ ಬಸ್ ಗಳಿಗೆ ಮೊದಲಿಗಿಂತ ದುಪಟ್ಟು ಹಣವನ್ನು ನೀಡಿ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದು ಕಡೆ ಕೊರೋನಾ ಹರಡುವ ಭಯ ಇನ್ನೊಂದೆಡೆ ಜೀವನ ಸಾಗಿಸಲು ಕೈ ಕೊಟ್ಟ ಆರ್ಥಿಕ ಪರಿಸ್ಥಿತಿ ಇದೆಲ್ಲದರ ನಡುವೆ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ, ಇದೆಲ್ಲವೂ ಬಡವನ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರಿ ಬಸ್ ಗಳು ಇದ್ದರೂ ಅದು ಸಾರ್ವಜನಿಕರಿಗೆ ಇಲ್ಲದಂತಾಗಿದೆ.


ರಿಕ್ಷಾಗಳಿಗೆ ಮೊರೆ ಹೋಗುತ್ತಿರುವ ಜನ -ತಿಂಗಳ ಸಂಬಳದಲ್ಲಿ ಅರ್ಧ ಸಂಬಳವನ್ನು ರಿಕ್ಷಾಗಳಿಗೆ ಜನ ನೀಡುತ್ತಾ ಇದ್ದಾರೆ. ಮನೆ ಖರ್ಚು ಸಂಭಾಳಿಸುವುದರ ಜೊತೆಗೆ ಇದೀಗ ಪ್ರಯಾಣದ ಖರ್ಚು ಕೂಡ ಒಂದು ಹೊರೆಯಾಗಿದೆ. ಆದರೆ ನಾಳೆ (ಜುಲಾಯಿ 16 )ಯಿಂದ ಗಡಿ ಸೀಲ್ ಡೌನ್ ಆಗಿದೆ. ಅದರ ಜೊತೆ ಬಸ್ಸು ಗಳ ಸಂಚಾರ ನಿಲ್ಲಿಸಲಾಗಿದೆ. “ಈ ರೀತಿ ನಮಗೆ ತೊಂದರೆ ನೀಡುವ ಬದಲು ಸಂಪೂರ್ಣ ಲಾಕ್ ಡೌನ್ ಮಾಡಬಹುದಿತ್ತು” ಎಂದು ಜನರ ಅಭಿಪ್ರಾಯ.


ನರ್ಮ್ ಬಸ್ – ಯು ಪಿ ಎ ಸರಕಾರದ ಅವಧಿಯಲ್ಲಿ ಬಸ್ಸುಗಳ ಸಮಸ್ಯೆ ಇರುವ ಸ್ಥಳಗಳಿಗೆ ನರ್ಮ್ ಬಸ್ ಸೇವೆಯನ್ನು ನೀಡಿದ್ದರು. ಆಗ ಆಗಿನ ಶಾಸಕರಾದ ಪ್ರಮೋದ್ ಮಧ್ವರಾಜ್ ನೇತ್ರತ್ವದಲ್ಲಿ ಬಸ್ ಗಳು ರಸ್ತೆಗಿಳಿದವು. ಇದೀಗ ಈ ಬಸ್ಸುಗಳು ಊಟಕ್ಕಿಲ್ಲದ್ದ ಉಪ್ಪಿನಕಾಯಿಯಂತಾಗಿರುವುದು ವಿಪರ್ಯಾಸವೇ ಸರಿ.

Leave a Reply

Your email address will not be published. Required fields are marked *

error: Content is protected !!