ಉಡುಪಿ: ಜುಲೈ 15 ರಿಂದ ಗಡಿ ಸೀಲ್ ಡೌನ್
ಉಡುಪಿ (ಉಡುಪಿ ಟೈಮ್ಸ್ ವರದಿ ): ಉಡುಪಿಯಲ್ಲಿ ಲಾಕ್ ಡೌನ್ ಇರುವುದಿಲ್ಲ. ಬದಲಿಗೆ ಜುಲೈ 15ರ ಸಂಜೆ 8 ಗಂಟೆಯ ಬಳಿಕ ಉಡುಪಿ ಜಿಲ್ಲೆಯ ಗಡಿಯನ್ನ ಬಂದ್ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ .
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜುಲೈ 15 ರ ಸಂಜೆ 8 ಗಂಟೆಯ ನಂತರ ಜುಲೈ 29 ವರೆಗೆ ಉಡುಪಿ ಜಿಲ್ಲೆಗೆ ಪ್ರವೇಶಿಸುವುದನ್ನ ಹಾಗು ಜಿಲ್ಲೆಯಿಂದ ಹೊರ ಹೋಗುವುದನ್ನ ಸಂಪೂರ್ಣ ನಿಷೇಧಿಸಲಾಗುವುದು. ರವಿವಾರ ಸಂಪೂರ್ಣ ಲಾಕ್ ಡೌನ್ ಮುಂದುವರೆಯಲಿದೆ. ಸಾಮಾಜಿಕ ಅಂತರವನ್ನ ಸರಿಯಾಗಿ ಪಾಲನೆ ಮಾಡದ ಕಾರಣ ಬಸ್ಸಿನ ಸಂಚಾರವನ್ನ ನಿಷೇಧಿಸಲಾಗಿದೆ.
ಈ ಸಂದರ್ಭದಲ್ಲಿ ಯಾವುದೇ ಸಂತೆ ನಡೆಸಲು ಅವಕಾಶವಿಲ್ಲ, ರಾಜಕೀಯ ಧಾರ್ಮಿಕ ಸಾಮಾಜಿಕ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಪೂರ್ವ ನಿಗದಿತ ಮದುವೆ ಕಾರ್ಯಕ್ರಮ ನಡೆಸಲು ಅವಕಾಶವಿದೆ.
ಸರಕಾರದ ಆದೇಶದಂತೆ ಅಂತ್ಯಸಂಸ್ಕಾರದಲ್ಲಿ 20 ಜನರು ಭಾಗವಹಿಸಬಹುದು. ಪೂರ್ವ ನಿರ್ಧರಿತ ಮದುವೆ ಸಮಾರಂಭಗಳನ್ನು ಸಂಬಂಧಿತ ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದು 50 ಜನಕ್ಕೆ ಮೀರದಂತೆ ನಡೆಸಬಹುದಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಮಾತ್ರ ಸೀಮಿತವಾಗಿಸಿದೆ. ಈ ಸಮಯದಲ್ಲಿ ಅರ್ಚಕರು, ಮೌಲ್ವಿಗಳು, ಧರ್ಮಗುರುಗಳು, ಭಕ್ತಾದಿಗಳು ಸೇರಿ 20 ಜನರಿಗಿಂತ ಜಾಸ್ತಿ ಇರುವಂತಿಲ್ಲ. ಯಾವುದೇ ವಿಶೇಷ ಪೂಜೆಗಳು, ಧಾರ್ಮಿಕ ಆಚರಣೆಗಳು ಈ ದಿನಗಳಲ್ಲಿ ಇರುವುದಿಲ್ಲ. ಸರಕಾರದ ಆದೇಶದಂತೆ ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ಇರಲಿದ್ದು, ಕೇವಲ ಮೆಡಿಕಲ್, ಕ್ಲಿನಿಕಲ್ ಲ್ಯಾಬ್, ಆಸ್ಪತ್ರೆ, ಹಾಲು, ದಿನಪತ್ರಿಕೆ ಮಾರಾಟಕ್ಕೆ ನಿರ್ಬಂಧವಿರುವುದಿಲ್ಲ. ಹೋಟೆಲ್ ಗಳಿಂದ ಪಾರ್ಸೆಲ್ ಗಳಿಗೆ, ಫುಡ್ ಡೆಲಿವರಿಗೆ ಅವಕಾಶವಿದೆ. ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. |
ಮನೆಯಲ್ಲಿ ಹಬ್ಬ ಆಚರಿಸಿ; ಇನ್ನು ಕೆಲವೇ ದಿನಗಳಲ್ಲಿ ಹಬ್ಬಗಳು ಪ್ರಾರಂಭವಾಗುತ್ತದೆ. ಎಲ್ಲರೂ ಮನೆಯಲ್ಲಿಯೇ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವ ಅವಕಾಶವಿಲ್ಲ. ದೇವಸ್ಥಾನ ಮಸೀದಿ ಚರ್ಚ್ ಸಾರ್ವಜನಿಕರ ದರ್ಶನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ಹಿಂದೆ ಅನುಮತಿ ನೀಡಿದಂತೆ ಅಂತಿಮ ಕಾರ್ಯಗಳಿಗೆ 20 ಜನರು ಸೇರುವ ಅವಕಾಶವಿರುವುದು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಮಾಡಿಕೊಂಡರೆ ಸಂತೋಷ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದರು .
ಸೀಲ್ ಡೌನ್ ಏಕೆ
ಜಿಲ್ಲೆಯಲ್ಲಿ ಹೊರಗಿನಿಂದ ಬಂದವರಿoದಲೇ ಹೆಚ್ಚಿನ ಸೋಂಕು ಪ್ರಕರಣಗಳು ಕಂಡುಬರುತ್ತಿದ್ದು, ಕೋವಿಡ್ ಪಾಸಿಟಿವ್ ಸೋಂಕಿತರ ಪೈಕಿ ಪ್ರಯಾಣ ಹಿನ್ನಲೆಯವರು 8.86% ಹಾಗೂ ಅವರ ಪ್ರಾಥಮಿಕ ಸಂಪರ್ಕಿತರು 14.2% ಹಾಗೂ ಸ್ಥಳೀಯ ಸೋಂಕಿತತು 2% ಮಾತ್ರ ಇದ್ದು, ಜಿಲ್ಲೆಯ ಗಡಿಯನ್ನು ಬಂದ್ ಮಾಡುವುದರಿಂದ , ಕೋವಿಡ್-19 ಸೋಂಕಿತರ ಜಿಲ್ಲೆಯ ಒಳ ಮತ್ತು ಹೊರ ಪ್ರವೇಶವನ್ನು ತಡೆಯಬಹುದು ಹಾಗೂ ಸೋಂಕಿನ ಹರಡುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಪ್ರತೀ ಮಿಲಿಯನ್ ಜನರಿಗೆ 5166 ಮಂದಿಯ ಕೋವಿಡ್-19 ಪರೀಕ್ಷೆ ಮಾಡಿದ್ದು, ಇದು ರಾಜ್ಯದ ಒಟ್ಟು ಸರಾಸರಿ ಸೇರಿದಂತೆ ಯಾವುದೇ ಜಿಲ್ಲೆಗಳಿಗಿಂತ ಅತ್ಯಧಿಕ, ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ದುಪ್ಪಟ್ಟು ಪ್ರಮಾಣ 39 ದಿನಗಳಿದ್ದರೆ , ದ.ಕನ್ನಡ ಜಿಲ್ಲೆ ಮತ್ತು ರಾಜ್ಯದಲ್ಲಿ 10 ಇದೆ, ಸಾವಿನ ಪ್ರಮಾಣ ರಾಜ್ಯದಲ್ಲಿ 1.80%, ದ.ಕನ್ನಡ ಜಿಲ್ಲೆಯಲ್ಲಿ 1.70% ಆದರೆ ಜಿಲ್ಲೆಯಲ್ಲಿ ಕೇವಲ 0.20% ಇದೆ , ಜಿಲ್ಲೆಯಲ್ಲಿ 390 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ ಇಂದು 80 ಮಂದಿ ಬಿಡುಗಡೆ ಹೊಂದಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಲಾಕ್ ಡೌನ್ ನಿಂದ ಕೋವಿಡ್-19 ನಿಯಂತ್ರಣ ಸಾಧ್ಯವಿಲ್ಲ, ನಮಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲದಿದಲ್ಲಿ ಮಾತ್ರ ಲಾಕ್ ಡೌನ್ ಅಂತಿಮ ನಿರ್ಧಾರವಾಗಬೇಕು ಎಂದು ತಜ್ಞರ ಸಮಿತಿ ತಿಳಿಸಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 1100 ಬೆಡ್ ಗಳು ಚಿಕಿತ್ಸಗೆ ಲಭ್ಯವಿದ್ದು, ಅಲ್ಲದೆ ಕೋವಿಡ್ ಕೇರ್ ಕೇಂಧ್ರಗಳಿಗಾಗಿ 1800 ಬೆಡ್ ಗಳನ್ನು ಗುರುತಿಸಿ ಅದನ್ನು ಸಕ್ರಿಯಗೊಳಿಸಲು ಸೌಲಭ್ಯ ಹೊಂದಿದ್ದೇವೆ. ಅಲ್ಲದೇ ಜಿಲ್ಲೆಯ 21 ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50 ಹಾಸಿಗೆಗಳನ್ನು ಚಿಕಿತ್ಸೆಗೆ ಮೀಸಲಿಡಲಾಗಿದೆ. ಪ್ರಸ್ತುತ
ಸರ್ಕಾರಿ ವ್ಯವಸ್ಥೆಯಲ್ಲಿನ ಆಸ್ಪತ್ರೆಗಳಲ್ಲಿ ಶೇ.70 ರಷ್ಟು ಬಳಕೆಯಾದರೆ ಮಾತ್ರ ಖಾಸಗಿ ಆಸ್ಪತ್ರೆಯ ಬೆಡ್ ಗಳನ್ನು ಬಳಸಿಕೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಗೆ ಸರ್ಕಾರಿ ವ್ಯವಸ್ಥೆಯಲ್ಲಿ ಎಪಿಎಲ್ ಬಿಪಿಎಲ್ ಭೇದವಿಲ್ಲದೇ ಎಲ್ಲರಿಗೂ ಚಿಕಿತ್ಸೆ ಉಚಿತವಾಗಿದ್ದು, ಜಿಲ್ಲಾಡಳಿತದಿಂದ ರೆಫರ್ ಆಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿದಲ್ಲಿ ಸಹ ಚಿಕಿತ್ಸೆ ಉಚಿತವಾಗಿದೆ. ಜಿಲ್ಲಾಡಳಿತದ ರೆಫರ್ ಇಲ್ಲದೇ ನೇರವಾಗಿ ತಮಗೆ ಇಷ್ಟಬಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು , ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ನಲ್ಲಿ ಪ್ರಸ್ತುತ 20 ಮಂದಿ ಇದ್ದು, 10 ವರ್ಷದಿಂದ 50 ವರ್ಷ ವಯೋಮಿತಿಯವರಿಗೆ ಈ ಸೌಲಭ್ಯವಿದೆ, ವೈದ್ಯರ ತಂಡ ಸೋಂಕಿತರ ಮನೆಯನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳಿದ್ದಲ್ಲಿ ಮಾತ್ರ ಹೋಂ ಐಸೋಲೇಷನ್ ಗೆ ಅನುಮತಿ ನೀಡಲಿದ್ದು, ಪ್ರತಿನಿತ್ಯ ಸೋಂಕಿತರ ಆರೋಗ್ಯ ದ ಕುರಿತು ವರದಿ ಪಡೆಯಲಿದ್ದು, ಅರೋಗ್ಯದಲ್ಲಿ ಏರು ಪೇರಾದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಡಿಸಿ ತಿಳಿಸಿದರು.
ಬೆಂಗಳೂರಿನಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಬೆಂಗಳೂರಿನಿAದ ಜಿಲ್ಲೆಗೆ ಬಂದವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗುವುದು , ಮನೆಯವರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎಂದು ಡಿಸಿ ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.