ಉಡುಪಿ: ಇಂದು 90 ಕೊರೊನಾ ಪಾಸಿಟಿವ್, 1,245 ಮಂದಿ ಡಿಸ್ಚಾರ್ಜ್
ಉಡುಪಿ- (ಉಡುಪಿ ಟೈಮ್ಸ್ ವರದಿ)- ಜಿಲ್ಲೆಯಲ್ಲಿ ಇಂದು 90 ಮಂದಿಗೆ ಕೊರೊನಾ ಸೋಂಕು ದೃಡಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1567 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 319 ಸಕ್ರಿಯ ಪ್ರಕರಣಗಳಿವೆ, ಇಲ್ಲಿಯವರೆಗೆ ಒಟ್ಟು 1245 ಮಂದಿ ಕೋರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಹಾಗು ಎಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಸೋಂಕಿತರಲ್ಲಿ ಉಡುಪಿ ತಾಲೂಕಿನ 66 ಮಂದಿ, ಕುಂದಾಪುರ ತಾಲೂಕಿನ 20 ಮಂದಿ ಹಾಗೂ ಕಾರ್ಕಳ ತಾಲೂಕಿನ ನಾಲ್ವರು ಸೇರಿದ್ದು. 57 ಮಂದಿ ಪುರುಷರು, 25 ಮಂದಿ ಮಹಿಳೆಯರು ಹಾಗೂ ಮೂವರು ಬಾಲಕರು, ಐವರು ಬಾಲಕಿಯರು ಸೇರಿದಂತೆ ಒಟ್ಟು ಎಂಟು ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಶನಿವಾರ ಬಂದ 90 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1567 ಕ್ಕೇರಿದೆ. ಜಿಲ್ಲೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ 21 ಮಂದಿ ಇಂದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. ಇವರಲ್ಲಿ ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ ಎಂಟು ಮಂದಿ, ಕಾರ್ಕಳದಿಂದ 11 ಮಂದಿ ಹಾಗೂ ಕುಂದಾಪುರದಿಂದ ಇಬ್ಬರು ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವು ಸಂಖ್ಯೆ 1245 ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 319 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 70 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 613ಕ್ಕೇರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 23 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 70 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು ತಿಳಿಸಿದ್ದಾರೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1533 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 2798 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36,216ಕ್ಕೇರಿಕೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಶನಿವಾರ ಒಂದೇ ದಿನ 880 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ. |