ಕಟೀಲು ದೇವಸ್ಥಾನದ 2 ಪ್ರತ್ಯೇಕ ಪ್ರಕರಣ: ಆರೋಪಿತರಿಗೆ ನಿರೀಕ್ಷಣಾ ಜಾಮೀನು
ಮಂಗಳೂರು: (ಉಡುಪಿ ಟೈಮ್ಸ್ ವರದಿ) ಇಲ್ಲಿನ ಪ್ರಸಿದ್ಧ ದೇವಾಲಯ ಕಟೀಲು ದೇವಸ್ಥಾನದ ಅಸ್ರಣ್ಣರ ಆಡಳಿತ ವೈಫಲ್ಯದ ಬಗ್ಗೆ ಹಾಗೂ ದೇವಸ್ಥಾನದ ವಿಧಿವಿಧಾನ, ಹಣಸಂದಾಯದ ದುರುಪಯೋಗ, ಮತ್ತಿತರ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗು ಮಾಧ್ಯಮದ ಮೂಲಕ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಆರೋಪಿಸಿ ಮುಲ್ಕಿ ಪೋಲಿಸ್ ಠಾಣೆ ಮತ್ತು ಬಜ್ಪೆ ಪೋಲಿಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಾಗಿದ್ದು ಇದೀಗ ಆರೋಪಿತರಿಗೆ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ಆದೇಶಿಸಿದೆ .
ಏನಿದು ಪ್ರಕರಣ ? ; ಕಟೀಲು ದೇವಸ್ಥಾನದ ಅಸ್ರಣ್ಣರ ಆಡಳಿತ ವೈಫಲ್ಯದ ಬಗ್ಗೆ ಹಾಗೂ ಹಣಸಂದಾಯದ ದುರುಪಯೋಗ, ಮತ್ತಿತರ ಅವ್ಯವಹಾರಗಳ ಬಗ್ಗೆ ಯುಟ್ಯುಬ್ ಹಾಗು ಚಾನೆಲ್ ಮುಖಾಂತರ ಪ್ರಸಾರ ಮಾಡಿ ಕಟೀಲು ದೇವಸ್ಥಾನದ ಪ್ರಖ್ಯಾತಿ ಮತ್ತು ಧಾರ್ಮಿಕ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಕೃತ್ಯ ಎಸಗಿದ್ದಾರೆಂದು, ಆರೋಪಿಸಿ ವಸಂತ ಗಿಳಿಯಾರ್, ಸಂಜೀವ ಮಡಿವಾಳ ಮತ್ತು ಅನಂತರಾವ್ ರವರ ಮೇಲೆ ಮುಲ್ಕಿ ಪೋಲಿಸ್ ಠಾಣೆ ಮತ್ತು ಬಜ್ಪೆ ಪೋಲಿಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ರಾಜೇಶ್ ಕೊಟ್ಟಾರಿ ಮತ್ತು ಗಣೇಶ್ ಶೆಟ್ಟಿಯವರು ದಾಖಲಿಸಿದ್ದರು.
ಈ ಪ್ರಕರಣವನ್ನು ಮಂಗಳೂರು ಮೂರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಲಯದ ನ್ಯಾಯಧೀಶರು ವಾದವನ್ನು ಆಲಿಸಿ ಯಾವುದೇ ಭಕ್ತಾಧಿಗಳ ಧಾರ್ಮಿಕ ಭಾವನೆಗೆ ದಕ್ಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲವೆಂದು ಪರಿಗಣಿಸಿ ಎರಡೂ ಪ್ರಕರಣಗಳಲ್ಲಿಯೂ ನಿರೀಕ್ಷಣಾ ಜಾಮೀನನ್ನು ನೀಡಿರುತ್ತಾರೆ. ಆರೋಪಿತರ ಪರವಾಗಿ ಉಡುಪಿಯ ನ್ಯಾಯವಾದಿಗಳಾದ ಆರೂರು ಸುಕೇಶ್ ಶೆಟ್ಟಿ, ಗಿರೀಶ್ ಎಸ್.ಪಿ ಏಳಿಂಜೆ, ಸಂತೋಷ್ ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.