ಉಡುಪಿ: ಕೊನೆಗೂ ಸಿದ್ದವಾಯಿತು ಜಿಲ್ಲಾ ಸರ್ಕಾರಿ ಕೋವಿಡ್ ಲ್ಯಾಬ್
ಉಡುಪಿ (ಉಡುಪಿ ಟೈಮ್ಸ್ ವರದಿ ): ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳನ್ನು ಪತ್ತೆ ಹಚ್ಚಲು , ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್ ಲ್ಯಾಬ್ ನಿರ್ಮಾಣದ ಕಾರ್ಯ ಸಂಪೂರ್ಣಗೊಂಡಿದ್ದು, ಯಾವುದೇ ಸಮಯದಲ್ಲಿ ಅಧಿಕೃತವಾಗಿ ತನ್ನ ಪರೀಕ್ಷಾ ಕಾರ್ಯ ಆರಂಭಿಸಲಿದೆ. ಇದರಿಂದ ಜಿಲ್ಲೆಯ ಕೋವಿಡ್ ಶಂಕಿತರ ಗಂಟಲು ದ್ರವದ ಪರೀಕ್ಷೆಯನ್ನು ಇತರೆ ಜಿಲ್ಲೆಗಳಿಗೆ ಕಳುಹಿಸುವ ಅಗತ್ಯ ಇಲ್ಲವಾಗಲಿದ್ದು, ಜಿಲ್ಲೆಯಲ್ಲಿ ಪ್ರಕರಣಗಳ ವರದಿ ಇಲ್ಲಿಯೇ ಪಡೆಯಲು ಸಾಧ್ಯವಾಗಲಿದೆ.
ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ನಿರ್ಮಾಣಕ್ಕೆ 1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಯಂತ್ರಗಳು ಮತ್ತು ಉಪಕರಣಗಳ ಸರಬರಾಜು ಅಗಿದ್ದು, ಲ್ಯಾಬ್ ನಿರ್ಮಾಣದ ಕಟ್ಟಡದ ಕಾಮಗಾರಿಗೆ 45 ಲಕ್ಷ ರೂ ವೆಚ್ಚವಾಗಿದೆ, ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು 1 ಮೈಕ್ರೋ ಬಯೋಲಜಿಸ್ಟ್ ಹಾಗೂ 8 ಮಂದಿ ಲ್ಯಾಬ್ ಟೆಕ್ನೀಷಿಯನ್ ಗಳನ್ನು ನೇಮಕ ಮಾಡಿಕೊಂಡಿದ್ದು, ಮೈಕ್ರೋ ಬಯೋಲಾಜಿಸ್ಟ್ ಹಾಗೂ ಇಬ್ಬರು ಲ್ಯಾಬ್ ಟೆಕ್ನೀಷಿಯನ್ ಗಳಿಗೆ ನಿಮಾನ್ಸ್ ನಲ್ಲಿ ಅಗತ್ಯ ತರಬೇತಿ ನೀಡಲಾಗುವುದು.
ನಿಮಾನ್ಸ್ ಮೂಲಕ 5 ಸ್ಯಾಂಪಲ್ ಗಳನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಉಡುಪಿ ಸರ್ಕಾರಿ ಕೋವಿಡ್ ಪ್ರಯೋಗಾಲಯಕ್ಕೆ ನೀಡಿದ್ದು, ಈ ಸ್ಯಾಂಪಲ್ ಗಳನ್ನು ಪರೀಕ್ಷಿಸಿ, ಈಗಾಗಲೇ ವರದಿಯನ್ನು ನಿಮಾನ್ಸ್ ಗೆ ಕಳುಹಿಸಲಾಗಿದ್ದು, ಈ ವರದಿ ನಿಮಾನ್ಸ್ ನ ವರದಿಯೊಂದಿಗೆ ಸರಿಯಾದಲ್ಲಿ , ಜಿಲ್ಲೆಯ ಸರ್ಕಾರಿ ಪ್ರಯೋಗಾಲಯದಲ್ಲಿ ಕೋವಿಡ್-19 ಮಾದರಿಗಳ ಪರೀಕ್ಷೆ ಆರಂಭವಾಗಲಿದೆ , ಮುಂದಿನ 2 ದಿನದೊಳಗೆ ನಿಮಾನ್ಸ್‌ನ ವರದಿ ಬರಲಿದೆ ಎಂಬುದಾಗಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಮಧುಸೂಧನ್ ನಾಯಕ್ ತಿಳಿಸಿದ್ದಾರೆ .
ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ಪರೀಕ್ಷಾ ಲ್ಯಾಬ್ ನಲ್ಲಿ , ಒಂದು ಬಾರಿಗೆ 95 ಸ್ಯಾಂಪಲ್ ಗಳ ಪರೀಕ್ಷೆ ಮಾಡಬಹುದಾಗಿದ್ದು, ಪರೀಕ್ಷಾ ವರದಿಗಾಗಿ 4 ರಿಂದ 6 ಗಂಟೆಗಳ ಅವಧಿ ತೆಗೆದುಕೊಳ್ಳಲಿದೆ, ಈ ಪ್ರಕಾರದಲ್ಲಿ ಈ ಲ್ಯಾಬ್ ನಲ್ಲಿ ದಿನಕ್ಕೆ ಗರಿಷ್ಠ 300 ಸ್ಯಾಂಪಲ್ ಗಳ ಪರೀಕ್ಷಾ ವರದಿ ಪಡೆಯಬಹುದಾಗಿದೆ.
ಸ್ಯಾಂಪಲ್ ನ ಸ್ವೀಕೃತಿಯಿಂದ , ವರದಿಯವರೆಗೆ ಸಂಪೂರ್ಣ ಆನ್ ಲೈನ್ ನಲ್ಲಿ ಮಾಹಿತಿ ದಾಖಲಿಸವುದು ಸೇರಿದಂತೆ ಐ.ಸಿ.ಎಂ.ಆರ್ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸಲಾಗುವುದು. ಲ್ಯಾಬ್ ನಲ್ಲಿ ಪಿಪಿಇ ಕಿಟ್ ಗಳನ್ನು ಧರಿಸಿಯೇ ಪರೀಕ್ಷೆ ನಡೆಸಬೇಕಾಗಿದ್ದು, ಟೆಸ್ಟಿಂಗ್ ಕಾರ್ಯ ನಿರ್ವಹಣೆ ಕುರಿತಂತೆ,ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಸಂಪೂರ್ಣ ತರಬೇತಿ ಪಡೆಯಲಾಗಿದೆ, ಸ್ಯಾಂಪಲ್ ಗಳನ್ನು ಆರಂಭದಲ್ಲಿ ಪ್ರೋಸೆಸಿಂಗ್ ಕೊಠಡಿಯಲ್ಲಿ ಸ್ವೀಕರಿಸಿ, ಬಯೋ ಸೇಪ್ಟಿ ಕ್ಯಾಬಿನಿಟ್ ನಲ್ಲಿಟ್ಟು ನಂತರ ಪಾಸ್ ಬಾಕ್ಸ್ ಮೂಲಕ ಪರೀಕ್ಷೆ ಕೊಠಡಿಗೆ ತಲುಪಿಸಿ, ಕೊನೆಗೆ ಆರ್.ಟಿ.ಪಿ.ಸಿ.ಆರ್ ಯಂತ್ರವಿರುವ ಕೊಠಡಿಗೆ ತಲುಪಿಸಿ ಅಲ್ಲಿರುವ ಯಂತ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಲ್ಯಾಬ್ ನ ಮೈಕ್ರೋ ಬಯಾಲಜಿಸ್ಟ್ ಡಾ. ಆನೀಟ್ ಡಿಸೋಜಾ ತಿಳಿಸಿದರು.
ಒಂದು ಸ್ಯಾಂಪಲ್ ನ ಪರೀಕ್ಷೆಗೆ ಟೆಸ್ಟ್ ಕಿಟ್ ಗಳು ಮತ್ತು ಇತರೆ ಅಗತ್ಯ ಸುರಕ್ಷತಾ ವಸ್ತುಗಳ ಬಳಕೆಯ ವೆಚ್ಚ ಸೇರಿದಂತೆ ರೂ.1600 ವೆಚ್ಚವಾಗಲಿದ್ದು, ಈ ಎಲ್ಲಾ ವೆಚ್ವನ್ನು ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಭರಿಸಲಾಗುವುದು ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.