ಸದ್ದು ಗುದ್ದುವ ಮದ್ದುಂಟೇ…?
ನಳ್ಳಿಯಲಿ ನೀರು ಬರುತಿಲ್ಲ
ಮನೆಯ ಕಸ ಹೋಗಿಲ್ಲ
ಸೊಳ್ಳೆ ನುಸಿಗಳ ಕಾಟ
ಚರಂಡಿ ಒಡೆದು ಗಬ್ಬುನಾತ …
ಕಳೆದ ಇಪ್ಪತ್ತು ವರುಷಗಳಿಂದ
ಕೇಳಿಸಿಕೊಂಡ ಅಹವಾಲು ಪಡೆದ ಅಭಿಮತ
ಕಾಪಾಡಬೇಕಲ್ಲವೇ ಮತಕೊಟ್ಟವರ ಹಿತ…?
ಇದಕ್ಕಾಗಿ ಕರೆದೆಬ್ಬಿಸುತ್ತಿದ್ದ ಹೊಸಗೆಳೆಯ
ಅನುಹೊತ್ತು ಕಿವಿಯ ಕಚ್ಚುತ್ತಿದ್ದ.
ಹಾಗಾಗಿಯೋ ಏನೋ…
ಇಂದು ಕಿವಿಯೊಳಗೆ ಸಿಳ್ಳೆ
ಗುಂಯ್ ಗುಟ್ಟಿದ ಸದ್ದು
ಒಮ್ಮೊಮ್ಮೆ ನಿಧಾನಕೆ
ಮತ್ತೊಮ್ಮೆ ಸ್ಪರ್ಧೆಗಿಳಿದಂತೆ
ಜೇನು ತೊಟ್ಟಿಕಟ್ಟಿರಬಹುದೇ
ಅದರಂತೆ ತನಗೂ ಇಲ್ಲದ ಕೂಡಿಟ್ಟ ಲಾಭ …
ಹೋದೆ ಹಳೆ ವೈದ್ಯರಲ್ಲಿಗೆ
ಕುಳ್ಳಿರಿಸಿದರು ಕಾಯುವ ಕೊಠಡಿಯಲಿ
ಒಳಗಿನಿಂದಲೇ ಕರೆ
ಕಿವಿಕಚ್ಚುವ ಗೆಳೆಯನಿಗೆ …!
ಮಹಾರಾಷ್ಟ್ರದಿಂದ ಮರಳಿದವರೇ
ದುಬಾಯಿಯಿಂದ ಬಂದವರೇ
ಮನೆಯಿಂದ ನೇರ ನಿಮ್ಮಲ್ಲಿಗೇ
ಪ್ರಯಾಣದ ಇತಿಹಾಸ ಬಚ್ಚಿಟ್ಟರೆ
ಅನುಮತಿ ಸಿಕ್ಕಿತು ಪರೀಕ್ಷಾ ಕೊಠಡಿಗೆ
ಕಿವಿಗೂ ಕೈಗೂ ದೃವ್ಯ ಲೇಪನೆ
ಕೋವಿದರಿಗೂ ಸವಾಲೊಡ್ಡಿದ ಕೋವಿಡನೇ …!
ಎದುರಿಗೆ ಕುಳಿತ ವೈದ್ಯರ ಹಣೆಯಲ್ಲಿ
ಕಟ್ಟಿದ ಹೊಳೆವ ಬೆಳಕಿನ ಉಂಡೆ
ಯಾವ ಕಿವಿಯಲಿ ಗುಂಯ್ಗುಟ್ಟುವ ಸದ್ದು?
ಕೇಳಿಸಿಕೊಳ್ಳಲೇ ಇಲ್ಲ ಕಿವಿಗೆ ಕೋಪ
ನಡುವೆ ಪಾರದರ್ಶಕ ಗಾಜಿನ ಗೋಡೆ
ಮೈಕಾಸುರ ಸಹಕರಿಸಿದ ಪಾಪ..!
ಕಿವಿಯ ಇಣುಕಿದರು
ಬೆಳಕ ಚೆಲ್ಲಿದರು
ಪರಿಶುದ್ಧ ಕಿವಿ
ಏನೂ ಆಗಿಲ್ಲ ಹೋಗಿ…
ಮರಳಿದ ಮರುಕ್ಷಣದಿ
ಲಯಬದ್ಧ ರಾಗ
ತಿಳಿಯಿತು ಮದ್ದಿಲ್ಲದೆ
ಮರಳಿ ಇವ ಹೋಗ…
ಬೆಳ್ಳುಳ್ಳಿ ದಳದ ಬೆಣೆಯಿಡಿಯೆಂದರು
ಸದ್ದ ಸೊಲ್ಲಡಗಲು ರಾಮಬಾಣವದೆಂದರು
ಕಿವಿಯ ಬಾವಿಯೊಳಗೆ ಹಣುಕಿ
ಇಣುಕಿ ಬಸವಳಿದಿದೆ ಎಸಳು
ಗಡ್ಡೆ ಎರಡು ಕಳಚಿ
ಬಿರುಗಣ್ಣು ಬಿಡುತಿದೆ ನನ್ನೆಡೆಗೆ
ಕಿವಿಯ ಬಾಯಿಗೆ ಬಿರಡೆಯಾಗಿ
ಬಳಸಿಕೊಂಡೆಯಲ್ಲ ಸುಮ್ಮನೇ
ಸಾರು ಸಾಂಬಾರುಗಳಲ್ಲಿ ಒಗ್ಗರಣೆಯಾಗಿ
ತೇಲಾಡುತ್ತಿದ್ದೆನೇ ಘಮ್ಮನೇ
ಹಿಂದೆ ಗೆಳೆಯಸಿಕ್ಕ ಖುಷಿ
ಬಿಮ್ಮನೆ ಬೀಗಿದೆ
ಈಗ ರಿಂಗಣಿಸಿದರೆ ಸಾಕು
ಕಿವಿಯ ಸದ್ದಿನ ಭೀತಿ
ಎತ್ತಿ ಕೇಳಲೇ…
ಕಿವಿಯ ಸದ್ದು ಗುದ್ದುವ ಮದ್ದುಂಟೇ…!?
ವಸಂತಿ ಶೆಟ್ಟಿ ಬ್ರಹ್ಮಾವರ