ಕೋಟ: ಹೋಟೆಲ್ ಮಾಲಕರಿಗೆ ಕೊರೋನಾ ಸೋಂಕು, ಹೋಟೆಲ್ ಸೀಲ್ ಡೌನ್

ಕೋಟ: ಇಲ್ಲಿನ ಲತಾ ರೆಸ್ಟೋರೆಂಟ್ ಮಾಲಕರಿಗೆ ಕೊರೋನಾ ಸೋಂಕು ದೃಡವಾಗಿದ್ದು, ಇದೀಗ ಹೋಟೆಲ್ ಸೀಲ್ ಡೌನ್ ಆಗಿದೆ. ಮಾಲಕರಿಗೆ ಕೊರೋನಾ ಪಾಸಿಟಿವ್ ಬಂದ ಬೆನ್ನಲ್ಲೇ ಹೋಟೆಲನ್ನು ಇಂದು ಸಂಜೆ ಸೀಲ್ ಡೌನ್ ಮಾಡಲಾಗಿದೆ.

ಹೋಟೆಲ್ ಉತ್ತಮ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಕೋಟ ಪರಿಸರದಲ್ಲಿ ಹೆಸರು ವಾಸಿಯಾಗಿತ್ತು. ಈ ಹೋಟೆಲ್ ಸೀಲ್ ಡೌನ್ ಆದ ನಂತರ ಅಲ್ಲಿ ಹೋದ ಗ್ರಾಹಕರಿಗೆ ಮತ್ತು ಪಾರ್ಸೆಲ್ ತೆಗೆದುಕೊಂಡು ಹೋದವರಿಗೆ ಆತಂಕ ಶುರುವಾಗಿದೆ .

ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ಒಂದೇ ದಿನ 7 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 253ಕ್ಕೇರಿಕೆಯಾಗಿದೆ.

ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಇಬ್ಬರು ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಬೆಂಗಳೂರಿನಲ್ಲಿ 735 ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 1272 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 16514ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಬುಧವಾರ 145 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 8063ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 8194 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 292 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 735, ಬಳ್ಳಾರಿಯಲ್ಲಿ 85, ದಕ್ಷಿಣ ಕನ್ನಡದಲ್ಲಿ 84, ಧಾರವಾಡದಲ್ಲಿ 35, ಬೆಂಗಳೂರು ಗ್ರಾಮಾಂತರದಲ್ಲಿ 29, ವಿಜಯಪುರ, ಹಾಸನದಲ್ಲಿ ತಲಾ 28, ಉತ್ತರಕನ್ನಡದಲ್ಲಿ 23, ಉಡುಪಿಯಲ್ಲಿ 22, ಚಾಮರಾಜನಗರದಲ್ಲಿ 21, ಬಾಗಲಕೋಟೆಯಲ್ಲಿ 20, ತುಮಕೂರಿನಲ್ಲಿ 19, ದಾವಣಗೆರೆಯಲ್ಲಿ 16, ಚಿಕ್ಕಬಳ್ಳಾಪುರದಲ್ಲಿ 15, ಕಲಬುರಗಿ, ರಾಮನಗರದಲ್ಲಿ ತಲಾ 14, ಕೊಪ್ಪಳದಲ್ಲಿ 13, ರಾಯಚೂರು, ಚಿತ್ರದುರ್ಗದಲ್ಲಿ ತಲಾ 12, ಯಾದಗಿರಿ, ಬೀದರ್‌, ಬೆಳಗಾವಿಯಲ್ಲಿ ತಲಾ 8, ಕೊಡಗಿನಲ್ಲಿ 7, ಮಂಡ್ಯ, ಕೋಲಾರದಲ್ಲಿ ತಲಾ 5, ಶಿವಮೊಗ್ಗದಲ್ಲಿ ತಲಾ 3, ಗದಗದಲ್ಲಿ 2, ಚಿಕ್ಕಮಗಳೂರಿನಲ್ಲಿ 1 ಪ್ರಕರಣಗಳು ವರದಿಯಾಗಿವೆ.

Leave a Reply

Your email address will not be published. Required fields are marked *

error: Content is protected !!