ಉದ್ಯಾವರ ನಿವಾಸಿ ಸೌದಿಯಲ್ಲಿ ಹೃದಯಾಘಾತದಿಂದ ಮೃತ್ಯು
ಉಡುಪಿ: (ಉಡುಪಿ ಟೈಮ್ಸ್ ವರದಿ) – ಉದ್ಯಾವರ ಬೋಳರ್‌ಗುಡ್ಡೆ ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತವಾಗಿ ಮೃತ ಪಟ್ಟಿದ್ದು, ಅವರ ಮೃತ ದೇಹ ತರಲು ಕುಟುಂಬಿಕರು ಕಳೆದ 17 ದಿನಗಳಿಂದ ಹರ ಸಾಹಸ ಪಡುತ್ತಿದ್ದಾರೆ.
ಸುಮಾರು ೧೨ ವರ್ಷಗಳಿಂದ ಸೌದಿಯ ಅಲ್ಯೂಮಿನಿಯಂ ಕಂಪೆನಿಯಲ್ಲಿ ದುಡಿಯುತ್ತಿದ್ದ, ಉದ್ಯಾವರ ಬೋಳಾರ್ ಗುಡ್ಡೆಯ ಉದಯ ಬಂಗೇರ (44) ಜೂನ್.3 ರಂದು ಅವರ ವಾಸ್ತವ್ಯದ ಕೊಠಡಿಯಲ್ಲಿ ಹೃದಯಾಘಾತವಾಗಿ ಮೃತ ಪಟ್ಟಿದ್ದರು.
ಇವರ ಮೃತದೇಹ ಅವರ ಹುಟ್ಟೂರಿಗೆ ತರಲು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಜೀತೇಂದ್ರ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಭಾರತ ಸರಕಾರದ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿ, ಮೃತ ದೇಹ ಊರಿಗೆ ತರುವಲ್ಲಿ ಪ್ರಯತ್ನ ಪಡುತ್ತಿರುವುದಾಗಿ ತಿಳಿಸಿದ್ದಾರೆ.
ಸೌದಿಯಿಂದ ಮಂಗಳೂರಿಗೆ ಬರುವ ವಿಮಾನದಲ್ಲಿ ಮುಂದಿನ ವಾರದಲ್ಲಿ ಉದಯ ಅವರ ಮೃತ ದೇಹ ಹುಟ್ಟೂರಿಗೆ ಬರುವ ಸಾಧ್ಯತೆ ಇದೆಯೆಂದು ಗ್ರಾಮ ಪಂಚಾಯತ್ ಸದಸ್ಯ ಜೀತೇಂದ್ರ ಶೆಟ್ಟಿ ‘ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ. ಮೃತರು ಪತ್ನಿ, ಆರು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ