ಕೋವಿಡ್-19 ಸಮಯದಲ್ಲಿ ಸಂಘ ಸಂಸ್ಥೆಗಳ ಸೇವೆ ಅಪಾರ: ರಘುಪತಿ ಭಟ್

ಉಡುಪಿ – ಕೊರೋನಾ ಮಹಾಮಾರಿ ಸಂದರ್ಭದ ದೇಶದಲ್ಲಿ ಲಾಕ್ ಡೌನ್ ಹೇರಿದಾಗ ಜನ ಸಾಮಾನ್ಯರಿಗೆ ನೆರವಾಗುವಲ್ಲಿ ಸಂಘ-ಸಂಸ್ಥೆಗಳ ಸಹಕಾರ ಅಪಾರ. ಉಡುಪಿಯಲ್ಲಿ ಬಡ ಜನರಿಗೆ, ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ, ಆಹಾರದ ಕಿಟ್ ನೀಡುವ ಸಂದರ್ಭದಲ್ಲಿ ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿ ಉಡುಪಿ ಇವರು ಕೈ ಜೋಡಿಸಿ ಸಹಕಾರ ನೀಡಿರುವುದು ಅವರ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ ಎಂದು ಶಾಸಕ ಕೆ. ರಘುಪತಿ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬಡಗಬೆಟ್ಟು ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಲಿ. ಉಡುಪಿ ಇವರು ದಿ.ಜೂನ್ 17 ರಂದು ಆಯೋಜಿಸಿದ ಕೋವಿಡ್ – 19 ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು .

ಕೋವಿಡ್ – 19 ಸಂಕಷ್ಟದ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಜೀವದ ಹಂಗನ್ನು ತೊರೆದು ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಅತ್ಯಂತ ಶ್ಲಾಘನೀಯ. ಹೊರ ರಾಜ್ಯಗಳಿಂದ ಹೆಚ್ಚಿನ ಜನ ಉಡುಪಿಗೆ ಆಗಮಿಸುತ್ತಿದ್ದು, ಅವರ ಬಗ್ಗೆ ನಿಗಾವಹಿಸಿ ಕೋವಿಡ್ – 19 ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ತುಂಬಾ ಜವಾಬ್ದಾರಿಯಿದೆ ಎಂದು ಹೇಳಿದ ಅವರು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಇವರ ಸಾಮಾಜಿಕ ಕಾರ್ಯಗಳು ಅಭಿನಂದನಾರ್ಹ ಎಂದರು.

ಕಾರ್ಯಕ್ರಮದಲ್ಲಿ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಪ್ರಧಾನ ವ್ಯವಸ್ಥಾಪಕರಾದ ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಗಣೇಶ್ ಆರ್, ಉಡುಪಿ ತಾಲೂಕಿನ ಆರೋಗ್ಯಾಧಿಕಾರಿಗಳಾದ ಡಾ. ನಾಗರತ್ನ, ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ನ ಉಪಾಧ್ಯಕ್ಷರಾದ ಎಲ್. ಉಮಾನಾಥ್, ಶತಮಾನೋತ್ಸವ ಸಮಿತಿಯ ಸಂಚಾಲಕರಾದ ಪುರುಷೋತ್ತಮ ಪಿ. ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!