ಅಂಬಲಪಾಡಿ: ಎಸ್‌ಎಲ್‌ಆರ್‌ಎಂ ಘಟಕಕ್ಕೆ ಗ್ರಾಮಸ್ಥರ ವಿರೋಧ
ಅಂಬಲಪಾಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿದಿಯೂರು ಮಜ್ಜಿಗೆಪಾದೆ ಪ್ರದೇಶದಲ್ಲಿ ಒಣ ಕಸ ವಿಲೇವಾರಿಯ ಎಸ್‌ಎಲ್‌ಆರ್‌ಎಂ ಘಟಕವನ್ನು ಸ್ಥಾಪಿಸುವ ಗ್ರಾಮ ಪಂಚಾಯತ್ ಉದ್ದೇಶದ ಬಗ್ಗೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜೂ.7 ರಂದು ಕಿದಿಯೂರು ಶ್ರೀ ವಿಷ್ಣುಮೂರ್ತಿ ವನದುರ್ಗಾ ದೇವಸ್ಥಾನದ ವಠಾರದಲ್ಲಿ ನಡೆದ ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಅಂಬಲಪಾಡಿ ಗ್ರಾಮ ಪಂಚಾಯತ್ ಸಹಿತ ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ವಿವಿಧ ಸ್ತರದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಕಿದಿಯೂರು ಮಜ್ಜಿಗೆ ಪಾದೆ ಪರಿಸರವು ಜನವಸತಿ ಪ್ರದೇಶವಾಗಿದ್ದು, ವಸತಿ ಸಮುಚ್ಚಯ, ದೇವಸ್ಥಾನ, ದೈವಸ್ಥಾನ ಮುಂತಾದ ಶ್ರದ್ಧಾ ಕೇಂದ್ರಗಳಿಂದ ಕೂಡಿದ ಸೂಕ್ಷ್ಮ ಪ್ರದೇಶವಾಗಿದೆ. ಗ್ರಾಮ ಪಂಚಾಯತ್‌ನ ಯಾವುದೇ ಜನಪರ ಅಭಿವೃದ್ಧಿ ಯೋಜನೆಗಳಿಗೆ ಗ್ರಾಮಸ್ಥರ ವಿರೋಧವಿಲ್ಲ. ಆದರೆ ಇಂತಹ ಜನನಿಬಿಡ ಸೂಕ್ಷ್ಮ ಪ್ರದೇಶವಾದ ಮಜ್ಜಿಗೆಪಾದೆ ಪರಿಸರದಲ್ಲಿ ಉದ್ದೇಶಿತ ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪನೆ ಯೋಜನೆಯನ್ನು ಸ್ಥಗಿತಗೊಳಿಸಿ ಬೇರೆ ಯಾವುದೇ ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಅಂಬಲಪಾಡಿ ಮತ್ತು ಕಿದಿಯೂರು ಗ್ರಾಮಸ್ಥರು ಒಕ್ಕೊರಲಿನ ಬೇಡಿಕೆಯನ್ನು ಗ್ರಾಮ ಪಂಚಾಯತ್‌ನ ಮುಂದೆ ಇಟ್ಟಿದ್ದಾರೆ.
ಸದ್ರಿ ಕಿದಿಯೂರು ಮಜ್ಜಿಗೆಪಾದೆ ಪ್ರದೇಶದಲ್ಲಿ ಚಿಣ್ಣರ ಪಾರ್ಕ್ ನಿರ್ಮಿಸುವ ಬಗ್ಗೆ ಅಂಬಲಪಾಡಿ ಗ್ರಾಮ ಪಂಚಾಯತ್ ಈ ಹಿಂದೆ ನಿರ್ಣಯ ಕೈಗೊಂಡಿದ್ದು ಪಾರ್ಕ್ ಅಭಿವೃದ್ಧಿ ಕಾಮಗಾರಿಯ ಸಲುವಾಗಿ ಸಂಸದರ ನಿಧಿಯಿಂದ ರೂ.2 .00 ಲಕ್ಷಗಳ ಅನುದಾನದ ಬಳಕೆಯಾಗಿದೆ. ಆದುದರಿಂದ ಸದ್ರಿ ಕಿದಿಯೂರು ಮಜ್ಜಿಗೆಪಾದೆ ಪ್ರದೇಶದಲ್ಲಿ ಉದ್ದೇಶಿತ ಎಸ್‌ಎಲ್‌ಆರ್‌ಎಂ ಘಟಕಕ್ಕೆ ನಿಗದಿಪಡಿಸಿರುವ ಸ್ಥಳವನ್ನು ದಾಖಲೆಯಲ್ಲಿ ಬದಲಿಸಿ ಗ್ರಾಮಸ್ಥರಿಗೆ ಸದುಪಯೋಗವಾಗುವ ವಾಕಿಂಗ್ ಟ್ರ್ಯಾಕ್, ಉದ್ಯಾನವನದ ಹಾಗೂ ಚಿಣ್ಣರ ಪಾರ್ಕ್ ನಿರ್ಮಿಸಲು ಕಾಯ್ದಿರಿಸಿ ಶೀಘ್ರವಾಗಿ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಗ್ರಾಮ ಪಂಚಾಯತನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ಅಂಬಲಪಾಡಿ-ಕಿದಿಯೂರು ಮಜ್ಜಿಗೆಪಾದೆ ಬಳಿ ಹಾದುಹೋಗುವ ರಸ್ತೆಯ ಬದಿಗಳಲ್ಲಿ ಹಾಗೂ ಮಳೆ ನೀರು ಹರಿಯುವ ತೋಡಿನಲ್ಲಿ ತ್ಯಾಜ್ಯಗಳು ಅವ್ಯಾಹತವಾಗಿ ಶೇಖರಣೆಗೊಳ್ಳುತ್ತಿವೆ. ಇದರೊಂದಿಗೆ ಕೆಲವೊಮ್ಮೆ ಉಡುಪಿ ನಗರ ಪ್ರದೇಶದ ಒಳಚರಂಡಿಯ ತ್ಯಾಜ್ಯಗಳೂ ಸೇರಿಕೊಂಡು ನಿರಂತರ ದುರ್ನಾತದ ಹವೆಯೊಂದಿಗೆ ಪರಿಸರದ ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಈ ಎಲ್ಲಾ ನೈಜ ಸಮಸ್ಯೆಗಳ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಕಿದಿಯೂರು ಮಜ್ಜಿಗೆಪಾದೆ ಬಳಿ ಉದ್ದೇಶಿತ ಎಸ್‌ಎಲ್‌ಆರ್‌ಎಂ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಬಲಪಾಡಿ-ಕಿದಿಯೂರು ಗ್ರಾಮಸ್ಥರಾದ ಕಾಳು ಶೆಟ್ಟಿಗಾರ್, ಮೋಹನ್‌ರಾಜ್ ಕುಂದರ್, ದೇವಾನಂದ್, ಹರೀಶ್ ಶೆಟ್ಟಿ, ಮನಿಷಾ ಗುರುದತ್ ಕಾಮತ್, ಶರತ್ ಶೆಟ್ಟಿ, ಚಂದ್ರಕಾಂತ್ ಶೆಟ್ಟಿ, ಸುರೇಶ್ ಭಟ್, ರಾಧಾಕೃಷ್ಣ, ಸಂತೋಷ್, ಸುಧೀರ್ ಶೆಟ್ಟಿ, ಕೀರ್ತಿ ಪೈ, ಆಶಾ ಚಂದ್ರಶೇಖರ್, ಸುಭದ್ರಾ ನಾಯಕ್, ನಾರಾಯಣ ಕಾಮತ್, ಕೃಷ್ಣಕುಮಾರ್ ಶೆಟ್ಟಿ ಮುಂತಾದವರು ಹಾಗೂ ಕಿದಿಯೂರು ಶ್ರೀ ವಿಷ್ಣುಮೂರ್ತಿ ವನದುರ್ಗಾ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಭಟ್ ಮತ್ತು ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.