ಜನಪ್ರತಿನಿಧಿಗಳೇ ಜನರ ಬದುಕಿನಲ್ಲಿ ಚೆಲ್ಲಾಟ ಬೇಡ : ಮಂಜುನಾಥ ಪೂಜಾರಿ
ಹೆಬ್ರಿ: ಹಸಿರು ವಲಯವಾಗಿದ್ದ ಉಡುಪಿ ಜಿಲ್ಲೆ ಜನಪ್ರತಿನಿಧಿಗಳು ಮತ್ತು ಸರ್ಕಾರದ ದಿವ್ಯ ನಿರ್ಲಕ್ಷದಿಂದಾಗಿ ಕೊರೊನಾ ಮಹಾಮಾರಿಯಲ್ಲಿ ಕೆಂಪು ವಲಯವಾಗಿ ಅಪಾಯದ ಹಂತ ದಾಟಿ ಜನತೆ ಈಗ ಭಯಭೀತರಾಗಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಅತೀಯಾದ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದರು.
ಅವರು ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಯ ಬಗೆಗೆ ಸಂಪೂರ್ಣ ತಿಳಿದಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಜಿಲ್ಲೆಯ ಶಾಸಕರು ಮಂಗಳೂರಿನ ಉಸ್ತುವಾರಿಯಾಗಿಸಿ ಉಡುಪಿ ಜಿಲ್ಲೆ ಬರದಂತೆ ಮಾಡಿದರು. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಮೂರ್ನಾಲ್ಕು ತಿಂಗಳಿಗೊಮ್ಮೆ ಅವರಿಗೆ ಪುರುಸೋತ್ತು ಇರುವಾಗ ಬಂದು ಹೋಗುತ್ತಾರೆ. ಯಾರಿಗೂ ಇಚ್ಚಾಶಕ್ತಿಇಲ್ಲ. ಒಂದು ದಿನ ಕೊರೊನಾ ಪಾಸಿಟಿವ್ ಬಂದರೆ ಅದೇ ವ್ಯಕ್ತಿಗೆ ಮರುದಿನ ಕೊರೊನಾ ನಗೆಟಿವ್ ಬರುತ್ತಿದೆ. ಕೊರೊನಾ ಪರೀಕ್ಷೆ ಯಾವ ರೀತಿ ನಡೆಯುತ್ತಿದೆ ಎಂದು ಗೊತ್ತಿಲ್ಲ. ಒಟ್ಟಾರೆ ಜನರ ಬದುಕಿನಲ್ಲಿ ಚೆಲ್ಲಾಟ ನಡೆಯುತ್ತಿದೆ. ಕೊರೊನಾ ಬಗ್ಗೆ ನಿಮಿಷಕ್ಕೊಂದು ನಿಯಮ ಬರುತ್ತಿದೆ.
14 ದಿನಗಳ ಕ್ವಾರಂಟೈನ್ ಇದೀಗ 7 ದಿನಕ್ಕೆ ಬಂದಿದೆ. ಕೊರೊನಾ ಪರೀಕ್ಷೆ ವರದಿ ಬರುವ ಮುಂಚೆಯೇ ಕ್ವಾರಂಟೈನ್ ಮಂದಿಯನ್ನು ಮನೆಗೆ ಕಳುಹಿಸಲಾಗುತ್ತಿದೆ. ಮತ್ತೇ ನಿಮ್ಮ ವರದಿ ಪಾಸಿಟಿವ್ ಬಂದಿದೆ ಎಂದು ಅವರ ಮನೆಗೆ ಅಧಿಕಾರಿಗಳ ತಂಡವೇ ಬಂದು ಮತ್ತೇ ಕ್ವಾರಂಟೈನ್ ಹೋಗಲು ಒತ್ತಡ ಹೇರಲಾಗುತ್ತಿದೆ. ಇದರಿಂದಾಗಿ ಅವರ ಮನೆಮಂದಿ ಕುಟುಂಬಸ್ಥರು ಎಲ್ಲರಿಗೂ ಭಯ ಆತಂಕದ ಜೊತೆಗೆ ಕೊರೊನಾ ಭೀತಿ ಹೆಚ್ಚಾಗುತ್ತಿದೆ ಹಲವೆಡೆ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಇದು ಸರ್ಕಾರದ ನಿರ್ಲಕ್ಷ ಮತ್ತು ಇಚ್ಚಾಶಕ್ತಿಯ ಕೊರತೆಯಿಂದಾ ನಡೆಯುತ್ತಿದೆ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ದೂರಿದರು.
ಕ್ವಾರಂಟೈನ್‍ನಲ್ಲಿರುವವರಿಗೆ ಊಟವನ್ನು ಸ್ಥಳೀಯ ದಾನಿಗಳ ಮೂಲಕ ಮಾಡಲಾಗುತ್ತಿದೆ. ಅದಕ್ಕಾಗಿ ಹಣ ಸಂಗ್ರಹಿಸಲಾಗುತ್ತಿದೆ. ಆದರೆ ಅದರ ಲಾಭ ಪ್ರಚಾರವನ್ನು ಜನಪ್ರತಿನಿಧಿಗಳು ಪಡೆಯುತ್ತಿದ್ದಾರೆ,ಕ್ವಾರಂಟೈನ್ ಕೇಂದ್ರಗಳ ಎಲ್ಲಾ ವ್ಯವಸ್ಥೆಯನ್ನು ಸ್ಥಳೀಯ ಅಧಿಕಾರಿಗಳೇ ಮಾಡಲಿ,ಅಲ್ಲಿಗೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಹೋಗಬಾರದು, ಇದಕ್ಕೆ ಜಿಲ್ಲಾಧಿಕಾರಿ ಕಠಿಣ ಕ್ರಮ ಕೈಗೊಳ್ಳಲಿ ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು.
ಉಸ್ತುವಾರಿ ಸಚಿವರನ್ನು ಬದಲಿಸಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮಂಗಳೂರಿನ ಜೊತೆಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಿ. ಅವರಿಗೆ ನಮ್ಮ ಜಿಲ್ಲೆ ಸಂಪೂರ್ಣ ಮಾಹಿತಿ ಇದೆ. ಅವರು ಕೊರೊನಾ ಮುಕ್ತ ಮಾಡಲು ಹೋರಾಟ ಮಾಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮತ್ತು ಮುದ್ರಾಡಿ ಮಂಜುನಾಥ ಪೂಜಾರಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.
ಮುಂಬಯಿಗರಿಗೆ ನಿಪ್ಪಾಣಿ ಗಡಿ ದಾಟಿದ ಕೂಡಲೆ ಕೊರೋನಾ – ಮಹಾರಾಷ್ಟ್ರದಲ್ಲಿ ನಮ್ಮೂರಿನ ಮಂದಿ 3 ತಿಂಗಳು ಲಾಕ್ ಡೌನ್‍ನಲ್ಲಿದ್ದೂ ಇದೀಗ ಉಡುಪಿ ಮಂಗಳೂರು ಜಿಲ್ಲೆಗೆ ಆಗಮಿಸಲು ನಿಪ್ಪಾಣಿ ಗಡಿ ದಾಟಿದ ಕೂಡಲೇ ಅವರಿಗೆ ಹೇಗೆ ಕೊರೊನಾ ಬರಲು ಸಾಧ್ಯ. ನಮಗೆ ಎಲ್ಲಾವೂ ಸಂಶಯವಾಗಿ ಕಾಣುತ್ತಿದೆ ಒಟ್ಟಾರೆ ಜನಸಾಮಾನ್ಯರಿಗೆ ಸರ್ಕಾರದ ನೀತಿಯಿಂದಾ ಭಾರೀ ಸಮಸ್ಯೆಯಾಗುತ್ತಿದೆ. ಕ್ವಾರಂಟೈನ್‍ನಲ್ಲಿರುವಾಗ ಕೊರೊನಾ ಪರೀಕ್ಷೆಯ ವರದಿ ಬರುವ ಮುಂಚೆ ಮನೆಗೆ ಹೋಗಲು ಬಿಡುವುದು ಏಕೆ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.
ಕೊರೊನಾ ಮಹಾಮಾರಿಯ ಲಾಕ್ ಡೌನ್ ಲಾಭವನ್ನು ಪಡೆದ ಮಂದಿಗೆ ಹೆಬ್ರಿ ಕಾರ್ಕಳ ತಾಲ್ಲೂಕಿನ ವಿವಿದೆಡೆ ಬೇಕಾಬಿಟ್ಟಿ ಮರಳು ದಂಧೆ, ಅಕ್ರಮ ಗಣಿಗಾರಿಕೆ ಮತ್ತು ಅರಣ್ಯ ಲೂಟಿ ನಡೆಯುತ್ತಿದೆ. ಇದಕ್ಕೆ ಜನಪ್ರತಿನಿಧಿಗಳ ರಕ್ಷೆ ಇರುವುದು ದುರಂತ. ಅಕ್ರಮಕ್ಕಾಗಿ ದಕ್ಷ ಅಧಿಕಾರಿಗಳ ವರ್ಗಾವಣೆ ಮಾಡಿ ತಮಗೆ ಬೇಕಾದವರನ್ನು ನಿಯೋಜಿಸಲಾಗುತ್ತಿದೆ ಎಂದು ಮಂಜುನಾಥ ಪೂಜಾರಿ ಆರೋಪಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ನಮ್ಮ ಜಿಲ್ಲೆಯ ಜನತೆಯ ಬಗೆಗೆ ಕಾಳಜಿ ವಹಿಸುತ್ತಿಲ್ಲ. ಅವರು ಎಲ್ಲೇಲ್ಲೋ ತಿರುಗಾಡುತ್ತಿದ್ದಾರೆ. ಮಾತೆತ್ತಿದರೇ, ತಬ್ಲೀಗಿ, ಕೋಮುವಾದ, ಮುಸ್ಲೀಮರು, ಪಾಕಿಸ್ಥಾನ ಇಷ್ಟೇ ಅವರ ಬಾಯಲ್ಲಿ ಬರುವುದು. ಅವರು ನಮ್ಮ ಜಿಲ್ಲೆ ಕೊರೊನಾ ವಿಷಯದಲ್ಲಿ ಏನು ಮಾಡಿದರು ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಕೊರೊನಾ ನಿಯಂತ್ರಣದ ಕ್ವಾರಂಟೈನ್ ಸಹಿತ ಎಲ್ಲಾ ವಿಷಯದಲ್ಲೂ ಸ್ವಷ್ಟವಾದ ನಿಲುವು ಕಠಿಣ ಆದೇಶ ಹೊರಡಿಸಬೇಕು. ಜನರ ಬದುಕಿನಲ್ಲಿ ಚೆಲ್ಲಾಟ ಆಡಬೇಡಿ. ಶೀಘ್ರವಾಗಿ ನೀತಿ ರೂಪಿಸಿ ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಂಜುನಾಥ ಪೂಜಾರಿ ಎಚ್ಚರಿಸಿದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್, ಉಪಾಧ್ಯಕ್ಷ ಶೀನಾ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಮುದ್ರಾಡಿ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಶಂಕರ ಶೇರಿಗಾರ್, ಐಟಿಸೆಲ್ ಅಧ್ಯಕ್ಷ ಸಂತೋಷ ನಾಯಕ್, ಶಶಿಕಲಾ ಆರ್ ಪಿ ಉಪಸ್ಥಿತರಿದ್ದರು.