ವಾಲ್ಮೀಕಿ ನಿಗಮ ಹಗರಣ: ಸ್ವ-ಇಚ್ಚೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ- ಬಿ.ನಾಗೇಂದ್ರ
ಬೆಂಗಳೂರು:ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದಿದೆ ಎನ್ನಲಾದ ರೂ. 94.73 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ವಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಯಾರೂ ನನ್ನ ಮೇಲೆ ಒತ್ತಡ ಹಾಕಿಲ್ಲ. ಯಾರಿಗೂ ಮುಜುಗರ ಆಗಬಾರದೆಂದು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಲು ನಿರ್ಧಾರ ತೆಗೆದುಕೊಂಡಿದ್ದೇನೆ. ಸಚಿವ ಸ್ಥಾನ ರಾಜೀನಾಮೆ ಕುರಿತು ಇನ್ನೂ ಮುಖ್ಯಮಂತ್ರಿಗೆ ಹೇಳಿಲ್ಲ. ರಾತ್ರಿ 7-30ಕ್ಕೆ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದ ಅವ್ಯವಹಾರ ಆರೋಪ ಕುರಿತು ಎಸ್ ಐಟಿ ತನಿಖೆ ನಡೆಯುತ್ತಿದೆ. ತಮ್ಮ ವಿರುದ್ಧದ ಎಲ್ಲಾ ಆರೋಪಗಳು ನಿರಾಧಾರ ಎಂದ ಸಚಿವರು, ಆರೋಪಗಳಿಂದ ಮುಕ್ತನಾಗಿ ಬಂದ ಮೇಲೆ ಮಾತನಾಡುವುದಾಗಿ ತಿಳಿಸಿದರು.